ಬೆಂಗಳೂರು: ಹೈಟೆನ್ನನ್ ವಿದ್ಯುತ್ ತಂತಿಯ ಮೇಲೆ ಕುಳಿತಿದ್ದ 2 ಲಕ್ಷ ಬೆಲೆಯ ವಿದೇಶಿ ಗಿಳಿಯನ್ನು ರಕ್ಷಿಸಲು ಹೋಗಿ ಯುವಕನೋರ್ವ ಮೃತಪಟ್ಟ ದಾರುಣ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ.
ಗಿರಿನಗರದ ಅಪಾರ್ಟ್‌ಮೆಂಟ್ ನಲ್ಲಿ ಈ ದುರಂತ ಸಂಭವಿಸಿದ್ದು, ಅರುಣ್ ಕುಮಾರ್ (32) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಅರುಣ್ ಅವರ 2 ಲಕ್ಷ ಬೆಲೆಯ ವಿದೇಶಿ ಗಿಳಿ ಗಿರಿನಗರದ ಅಪಾರ್ಟ್‌ಮೆಂಟ್ ಒಳಭಾಗದಲ್ಲಿರುವ ಹೈಟೆನ್ನನ್ ವೈರ್ ಕಂಬದ ಮೇಲೆ ಕುಳಿತ್ತಿತ್ತು. ಇದನ್ನು ನೋಡಿದ ಅರುಣ್ ಕುಮಾರ್, ಕಾಂಪೌಂಡ್ ಮೇಲೆ ನಿಂತು ಸ್ಟೀಲ್ ಪೈಪ್ ಮೂಲಕ ಅದನ್ನು ಅಲ್ಲಿಂದ ಓಡಿಸಲು ಪ್ರಯತ್ನಿಸಿದಾಗ ವಿದ್ಯುತ್ ವೈರ್‌ಗೆ ಪೈಪ್ ತಗುಲಿ ಶಾಕ್ ಹೊಡೆದಿದೆ ಎನ್ನಲಾಗಿದೆ.
ಸ್ಥಳಕ್ಕೆ ಬೆಸ್ಕಾಂ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಪಾರ್ಟ್‌ಮೆಂಟ್ ಒಳಗೆ 66 ಸಾವಿರ ಕೆವಿ ಸಾಮರ್ಥ್ಯದ ವೈರ್‌ಗಳು ಇರುವುದಕ್ಕೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಗ್ರ ತನಿಖೆ ನಡೆಯುವಂತೆ ಆಗ್ರಹಿಸಿದ್ದಾರೆ.
ಗಿಳಿಯನ್ನು ಅಲ್ಲಿಂದ ರಕ್ಷಿಸಲು ಹೋಗಿ ಯುವಕನೇ ವಿದ್ಯುತ್ ಶಾಕ್‌ಗೆ ಗುರಿಯಾಗಿ ಅಸು ನೀಗಿದ್ದು, ಸ್ಥಳೀಯರಿಗೆ ಆಘಾತ ತಂದಿದೆ. 66 ಸಾವಿರ ಕೆವಿ ವಿದ್ಯುತ್ ವೈರ್‌ನಿಂದ ಹೊಡೆದ ಶಾಕ್‌ಗೆ ಅರುಣ್ ಕಾಂಪೌಂಡ್ ಮೇಲಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ,ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.


