ಬೌಲರ್ ಗಳ ಸಂಘಟಿತ ಪ್ರದರ್ಶನದಿಂದ ಟಿ-20 ವಿಶ್ವಕಪ್ ನಲ್ಲಿ ಕಳಪೆ ಮೊತ್ತ ದಾಖಲಿಸಿಯೂ ಭಾರತ ತಂಡ 6 ರನ್ ಗಳಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಜಯಭೇರಿ ಬಾರಿಸಿದೆ.
ನ್ಯೂಯಾರ್ಕ್ ನಲ್ಲಿ ಭಾನುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ತಂಡ 18.5 ಓವರ್ ಗಳಲ್ಲಿ 119 ರನ್ ಗೆ ಆಲೌಟಾಯಿತು. ಸುಲಭ ಗುರಿ ಬೆಂಬತ್ತಿದ ಪಾಕಿಸ್ತಾನ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 113 ರನ್ ಗಳಿಸಲಷ್ಟೇ ಶಕ್ತವಾಯಿತು.
ಈ ಗೆಲುವಿನೊಂದಿಗೆ ಭಾರತ ಎ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದರೆ, ಅಮೆರಿಕ 2 ಗೆಲುವಿನೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಸತತ 2 ಸೋಲುಂಡಿರುವ ಪಾಕಿಸ್ತಾನ ಮೂರನೇ ಸ್ಥಾನಕ್ಕೆ ಕುಸಿದಿದೆ. ಇದರಿಂದ ಪಾಕಿಸ್ತಾನ ಲೀಗ್ ಹಂತದಿಂದಲೇ ಹೊರಬೀಳುವ ಅಪಾಯಕ್ಕೆ ಸಿಲುಕಿದೆ.
ಪಾಕಿಸ್ತಾನ ತಂಡಕ್ಕೆ ಬಾಬರ್ ಅಜಮ್ (13) ಮತ್ತು ಮೊಹಮದ್ ರಿಜ್ವಾನ್ (31) ಮೊದಲ ವಿಕೆಟ್ ಗೆ 26 ರನ್ ಪೇರಿಸಿ ಉತ್ತಮ ಆರಂಭ ನೀಡಿದರು. ಉಸ್ಮಾನ್ (13), ಜಮಾನ್ (13) ಮತ್ತು ಇಮಾದ್ (15) ಮಾತ್ರ ಎರಡಂಕಿಯ ಮೊತ್ತ ದಾಟಿದರಾದರೂ ನಿಧಾನಗತಿ ಬ್ಯಾಟಿಂಗ್ ನಿಂದ ಗುರಿಯತ್ತ ತಲುಪಲು ವಿಫಲರಾದರು.
ಜಸ್ ಪ್ರೀತ್ ಬುಮ್ರಾ 14 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಹಾರ್ದಿಕ್ ಪಾಂಡ್ಯ 2, ಅರ್ಷದೀಪ್ ಸಿಂಗ್ ಮತ್ತು ಅಕ್ಸರ್ ಪಟೇಲ್ ತಲಾ 1 ವಿಕೆಟ್ ಪಡೆದು ಪಾಕಿಸ್ತಾನವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು. ಅಲ್ಲದೇ ಭಾರತ ಟಿ-20 ವಿಶ್ವಕಪ್ ಇತಿಹಾಸದಲ್ಲೇ ಕಳಪೆ ಮೊತ್ತ ದಾಖಲಿಸಿಯೂ ಗೆದ್ದ ದಾಖಲೆ ಬರೆಯಿತು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ನಿಯಮಿತವಾಗಿ ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯಿತು. ಇದೇ ಮೊದಲ ಬಾರಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ (4) ಒಂದಂಕಿ ಮೊತ್ತಕ್ಕೆ ಔಟಾದರೆ, ರೋಹಿತ್ ಶರ್ಮ (13) ಕೂಡ ಹೊಡಿಬಡಿ ಆಟಕ್ಕೆ ಮುಂದಾಗಿ ವಿಕಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಮತ್ತು ಅಕ್ಸರ್ ಪಟೇಲ್ ಮೂರನೇ ವಿಕೆಟ್ ಗೆ 39 ರನ್ ಜೊತೆಯಾಟದಿಂದ ತಂಡವನ್ನು ಕುಸಿತದಿಂದ ಪಾರು ಮಾಡಲು ಯತ್ನಿಸಿದರು. ಪಂತ್ 31 ಎಸೆತದಲ್ಲಿ 6 ಬೌಂಡರಿ ಸಹಾಯದಿಂದ 42 ರನ್ ಬಾರಿಸಿ ಔಟಾದರೆ, ಅಕ್ಸರ್ ಪಟೇಲ್ 18 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 20 ರನ್ ಗಳಿಸಿ ನಿರ್ಗಮಿಸಿದರು.
ಸ್ಫೋಟಕ ಬ್ಯಾಟಿಂಗ್ ಗೆ ಹೆಸರಾದ ಸೂರ್ಯಕುಮಾರ್ ಯಾದವ್ (7), ಶಿವಂ ದುಬೆ (3) ಮತ್ತು ಹಾರ್ದಿಕ್ ಪಾಂಡ್ಯ (7) ಮತ್ತು ರವೀಂದ್ರ ಜಡೇಜಾ (0) ಕಳಪೆ ಮೊತ್ತಕ್ಕೆ ಔಟಾಗಿದ್ದರಿಂದ ತಂಡ ಉತ್ತಮ ಮೊತ್ತ ದಾಖಲಿಸುವಲ್ಲಿ ವಿಫಲವಾಯಿತು.