ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ ಮತ್ತು ಚುನಾವಣಾ ತಂತ್ರಗಾರಿಕೆ ತಜ್ಞ ಹಾಗೂ ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಗೌಪ್ಯ ಸಭೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಹೀನಾಯ ಪ್ರದರ್ಶನ ನೀಡಿದ್ದವು. ಕಳೆದ ಬಾರಿ 16 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 61 ಸ್ಥಾನಗಳಲ್ಲಿ ಸ್ಪರ್ಧಿಸಿ 6ರಲ್ಲಿ ಮಾತ್ರ ಜಯ ಸಾಧಿಸಿತ್ತು. ಜನ ಸುರಾಜ್ ಪಕ್ಷ 268 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೂ ಒಂದೂ ಸ್ಥಾನ ಗೆಲ್ಲದೇ ಶೂನ್ಯ ಸಾಧನೆ ಮಾಡಿತ್ತು.
ಕಾಂಗ್ರೆಸ್ ಪಕ್ಷಕ್ಕೆ ಕಳೆದ ಲೋಕಸಭಾ ಚುನಾವಣೆಯಲ್ಲಿ ತಂತ್ರಗಾರಿಕೆ ರೂಪಿಸಿಕೊಟ್ಟಿದ್ದ ಪ್ರಶಾಂತ್ ಕಿಶೋರ್, ನಂತರ ಕಾಂಗ್ರೆಸ್ ಪಕ್ಷದಲ್ಲಿ ಸಮಗ್ರ ಬದಲಾವಣೆ ಮಾಡಲು ಮುಂದಾಗಿದ್ದರು. ಆದರೆ ರಾಹುಲ್ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ವಿರೋಧಿಸಿದ್ದರಿಂದ ಅಸಮಾಧಾನಗೊಂಡು ಹೊರಗೆ ಬಂದಿದ್ದರು. ಆದರೆ ಪ್ರಿಯಾಂಕಾ ಗಾಂಧಿ ಪ್ರಶಾಂತ್ ಕಿಶೋರ್ ಗೆ ಮುಕ್ತ ಅವಕಾಶ ನೀಡಲು ಬಯಸಿದ್ದರು.
ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಭೇಟಿ ಮಾಡಿದ್ದ ಪ್ರಶಾಂತ್ ಕಿಶೋರ್ ಮತ್ತು ಪ್ರಿಯಾಂಕಾ ಗಾಂಧಿ ಸುಮಾರು ಮೂರೂವರೆ ವರ್ಷಗಳ ನಂತರ ಇದೇ ಮೊದಲ ಬಾರಿ ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ.
ಇಬ್ಬರೂ ಸುದೀರ್ಘ 4 ಗಂಟೆಗಳ ಕಾಲ ಮಾತುಕತೆ ನಡೆಸಿದ್ದರೂ ಇಬ್ಬರೂ ಮಾತುಕತೆ ನಿರಾಕರಿಸಿದ್ದಾರೆ. ಈ ಮೂಲಕ ಇವರ ಭೇಟಿ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಮಾತುಕತೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ ಗಾಂಧಿ, ನಾನು ಯಾರನ್ನು ಭೇಟಿ ಮಾಡಿದರೂ ಮಾಡದೇ ಇದ್ದರೂ ಯಾರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ನಾನು ಯಾವುದೇ ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿಲ್ಲ ಎಂದು ಪ್ರಶಾಂತ್ ಕಿಶೋರ್ ಹೇಳಿಕೆ ನೀಡಿದ್ದಾರೆ.


