ಹೈಕಮಾಂಡ್ ಹೇಳುವವರೆಗೂ ನಾನೇ ಸಿಎಂ. ಈಗಲೂ ನಾನೇ ಸಿಎಂ, ಮುಂದೆನೂ ನಾನೇ ಸಿಎಂ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆ ಅಧಿವೇಶನದಲ್ಲಿ ಪ್ರತಿಪಕ್ಷಗಳ ಪ್ರಶ್ನೆಗೆ ಖಡಕ್ ಉತ್ತರ ನೀಡಿದ್ದಾರೆ.
ಬೆಳಗಾವಿ ಅಧಿವೇಶನದಲ್ಲಿ ಮಂಗಳವಾರ ನಡೆದ ಪ್ರಶ್ನೋತ್ತರ ಅವಧಿಯಲ್ಲಿಸಿಎಂ ಸ್ಥಾನದ ಬಗೆಗಿನ ಕುತೂಹಲದ ಚರ್ಚೆ ವೇಳೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನೆಗೆ ಜನರು ನಮಗೆ ಐದು ವರ್ಷ ಆಶೀರ್ವಾದ ನೀಡಿದ್ದು, ಹೈಕಮಾಂಡ್ ಹೇಳುವ ತನಕ ನಾನೇ ಸಿಎಂ ಆಗಿ ಮುಂದುವರಿಯುತ್ತೇನೆ ಎಂದು ಸ್ಪಷ್ಟಪಡಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ನಾಯಕತ್ವ ಬದಲಾವಣೆ ವಿಚಾರವನ್ನು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಸ್ತಾಪಿಸಿದರು. ಶಾಸಕ ರಂಗನಾಥ್ರ ಕುಣಿಗಲ್ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಅನುದಾನ ಬಿಡುಗಡೆ ಸಂಬಂಧ ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಉತ್ತರಿಸುತ್ತಾ, ನನ್ನ ಮೇಲೆ ವಿಶ್ವಾಸವಿಡಿ ಅದನ್ನು ಸರಿಪಡಿಸೋಣ ಎಂದರು. ಆಗ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್.ಅಶೋಕ್, ಈ ವೇಳೆ ಬೇಕು ಅಂತಾ ತಾರತಮ್ಯ ಮಾಡಿದ್ರಾ ಹೇಗೆ ಎಂದು ಸಿಎಂ ಅವರನ್ನು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ನೀವು ಉರಿಯೋ ಬೆಂಕಿಗೆ ತುಪ್ಪ ಹಾಕೋಕೆ ಹೋಗಬೇಡ ಎಂದರು. ಆಗ ವಿಪಕ್ಷ ನಾಯಕ ಆರ್.ಅಶೋಕ್, ಹಾಗಿದ್ದರೆ ಉರಿಯುತ್ತಿರುವುದು ಗ್ಯಾರಂಟಿಯಲ್ವಾ ಎಂದು ಕಿಚಾಯಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಅದು ಗಾದೆ ಮಾತು ಎಂದರು. ಇದಕ್ಕೆ ಆರ್.ಅಶೋಕ್, ಈ ನಡುವೆ ಅವರು ಪೂಜೆ ಪುರಸ್ಕಾರಗಳನ್ನು ಮಾಡ್ತಿದ್ದಾರೆ. ಅವರು ಸಿಎಂ ಆಗೋಕೆ ಎಂದು ಡಿಕೆಶಿ ಕಡೆ ಬೆರಳು ತೋರಿಸಿ ಕಾಲೆಳೆದರು. ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯಬೇಡ ಅಂತಿದ್ದಾರೆ. ಅಧ್ಯಕ್ಷರೇ ಹಾಗಿದ್ದರೆ ಅಲ್ಲಿ ಉರಿಯುತ್ತಿರೋದು ನಿಜಾ ಅಲ್ಲವಾ ಎಂದು ಪ್ರಶ್ನಿಸಿದರು.
ಈ ವೇಳೆ ಸುನೀಲ್ ಕುಮಾರ್ ಮಾತನಾಡಿ, ಗಾದೆ ಮಾತಾಡಿದ್ರೋ, ನಿಮ್ಮಲ್ಲಿ ಆಗ್ತಿರೋದನ್ನು ಹೇಳಿದ್ರೋ ಎಂದು ಕಿಚಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿ, ನಿಮಗೆ ಗಾದೆ ಮಾತು ಗೊತ್ತಿಲ್ಲ ಅಂದರೆ ನಾನು ಏನು ಹೇಳಲಿ. ಉರಿಯೋ ಬೆಂಕಿಗೆ ತುಪ್ಪ ಹಾಕೋದೇ ವಿರೋಧ ಪಕ್ಷದವರ ಕೆಲಸ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಆರ್.ಅಶೋಕ್, ನಾವು ತುಪ್ಪ ಹಾಕಿದರೆ ಪರವಾಗಿಲ್ಲ, ಆದರೆ ದಿನ ಅವರೇ ತುಪ್ಪ ಹಾಕ್ತಾ ಇದ್ದಾರಲ್ಲಾ ಎಂದು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಸಿಎಂ, ಅವರು ಸುಮ್ಮನೆ ಇದ್ದಾರೆ ನೀನು ಯಾಕೇ ಸುಮ್ಮನೆ ಇರಲ್ಲ. ಅವರು ಏನು ಮಾಡುತ್ತಿಲ್ಲ. ಆದರೆ ಎಲ್ಲವನ್ನೂ ನೀವೇ ಮಾಡ್ತಿರೋದು. ವಿರೋಧ ಪಕ್ಷದವರು ಏನೇ ಪ್ರಚೋದನೆ ಮಾಡಿದರೂ, ನಮ್ಮವರು ಯಾರು ಕೂಡ ಪ್ರಚೋದನೆಗೆ ಒಳಗಾಗುವುದಿಲ್ಲ ಎಂದು ತಿರುಗೇಟು ನೀಡಿದರು.
ನೀವು ಐದು ವರ್ಷ ಸಿಎಂ ಆಗಿರುವುದಿಲ್ಲವೇ ಎಂದು ಆರ್. ಅಶೋಕ್ ಪ್ರಶ್ನಿಸಿದರು. ಅದಕ್ಕೆ ಸಿಎಂ, ಅದನ್ನು ನೀನು ಯಾಕೇ ಕೇಳ್ತೀಯಾ?. ಜನರು ಐದು ವರ್ಷ ಇರೀ ಎಂದು ಆಶೀರ್ವಾದ ಮಾಡಿದ್ದಾರೆ. ಹಾಗಾಗಿ ನಾವೇ ಇರುತ್ತೇವೆ. ನಮ್ಮಲ್ಲಿ ಹೈಕಮಾಂಡ್ ಇದೆ, ಹೈಕಮಾಂಡ್ ಏನು ತೀರ್ಮಾನ ಮಾಡ್ತಾರೋ ಅದರಂತೆ ಕೇಳ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಈ ವೇಳೆ ಗ್ಯಾರಂಟಿನಾ ಸರ್ ಎಂದು ಆರ್.ಅಶೋಕ್ ಕಾಲೆಳೆದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಪರಮೇಶ್ವರ್, ಐದು ವರ್ಷಗಳ ಕಾಲ ಜನರು ಅವಕಾಶ ಮಾಡಿಕೊಟ್ಟಿದ್ದಾರೆ. ನಾವೇ ಇರುತ್ತೇವೆ ಎಂದು ಸಿಎಂ ಹೇಳಿದ್ರು ನೀವು ಯಾಕೇ ಹೀಗೆ ಕೇಳ್ತೀರಾ ಎಂದು ಪ್ರಶ್ನಿಸಿದರು. ಈ ವೇಳೆ ಆರ್.ಅಶೋಕ್, ಪರಮೇಶ್ವರ್ ಒಬ್ಬರೇ ಸರ್ ಯಾವಾಗಲೂ ನಿಮ್ಮ ಪರ ನಿಲ್ಲೋದು. ಏನಾದರೂ ಅವಕಾಶ ಆದರೆ ಬ್ಲಾಕ್ ಹಾರ್ಸ್ ರೀತಿ ಆಗಬಹುದಾ ಪರಮೇಶ್ವರ್ ಎಂದು ಕಾಲೆಳೆದರು
140 ಜನ ಶಾಸಕರು ನಮ್ಮ ಜೊತೆ ಇದ್ದಾರೆ: ನಮ್ಮದೇ ಸರ್ಕಾರ ಇದೆ, ಐದು ವರ್ಷ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಎಲ್ಲಾ 140 ಜನ ಶಾಸಕರು ನಮ್ಮ ಜೊತೆ ಇದ್ದಾರೆ. 2028ಕ್ಕೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಬಿಜೆಪಿಯವರಿಗೆ ಯಾವ ಕಾರಣಕ್ಕೂ ಕರ್ನಾಟಕದ ಜನರು ಆಶೀರ್ವಾದ ಮಾಡಲ್ಲ. ಎರಡು ಬಾರಿ ಹಿಂದೆ ಅಧಿಕಾರ ಮಾಡಿದ್ರಲ್ಲ?. ಯಾವಾತ್ತಾದರೂ ಜನರು ಆಶೀರ್ವಾದ ತಗೊಂಡು ಅಧಿಕಾರ ಮಾಡಿದ್ದೀರಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಆಪರೇಷನ್ ಕಮಲ, ಬರೀ ಹಿಂಬಾಗಿಲಿನಿಂದ ನೀವು ಅಧಿಕಾರಕ್ಕೆ ಬಂದವರು. ಜನರು ಯಾವತ್ತೂ ನಿಮಗೆ ಆಶೀರ್ವಾದ ಮಾಡಲ್ಲ ಎಂದು ಟೀಕಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರ್.ಅಶೋಕ್, 2019ರಲ್ಲಿ ನಿಮಗೆ ಜನರು ಆಶೀರ್ವಾದ ಮಾಡಿದ್ರಾ?, ಜೆಡಿಎಸ್ ನವರ ಜೊತೆ ಹೋದ್ರಲ್ಲ. ಅವರ ಮನೆ ಬಾಗಿಲಿಗೆ ಹುಡುಕಿಕೊಂಡು ಹೋಗಿದ್ರಲ್ಲ ಎಂದು ಕಿಚಾಯಿಸಿದರು.
ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ನಾವು ಅವರ ಮನೆಗೆ ಹೋಗಿರಲಿಲ್ಲ. ಜೆಡಿಎಸ್ ನವರು ಹೇಳ್ಕೊಳ್ತಾರೆ ನಾವು ಹೋಗಿಲ್ಲ. ಆವಾಗ ಬಿಜೆಪಿಯವರು ಅಧಿಕಾರಕ್ಕೆ ಬರಬಾರದು ಅಂತಾ ಅಷ್ಟೇ ಇದ್ದಿದ್ದು. ನೀವು ಯಾಕೇ ಜೆಡಿಎಸ್ನವರ ಜೊತೆ ಹೋಗಿದ್ದೀರಿ ಎಂದು ಸಿಎಂ ತಿರುಗೇಟು ನೀಡಿದರು.
ಐದು ವರ್ಷ ಇರೀ ಎಂದು ಜನ ಆಶೀರ್ವಾದ ಮಾಡಿದ್ದಾರೆ. ಐದು ವರ್ಷ ನಾವೇ ಅಧಿಕಾರದಲ್ಲಿ ಇರುತ್ತೇವೆ. ಐದು ವರ್ಷ ನನಗೆ ಆಶೀರ್ವಾದ ಮಾಡಿದ್ದಾರೆ. 2028ಕ್ಕೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸುರೇಶ್ ಕುಮಾರ್, ಸಿಎಂ ನಾವೇ ಐದು ವರ್ಷ. ಅಂತಾ ಏಕ ವಚನ ದಿಂದ ಬಹುವಚನಕ್ಕೆ ಬಂದಿದ್ದಾರೆ. ನಾನು ಹೋದಲ್ಲಿ ಮಾತ್ರ ಹೋಗುತ್ತೇನೆ ಎಂಬ ಕನಕದಾಸರ ಮಾತಿನಂತೆ ಆಗಿದೆ ಸಿದ್ದರಾಮಯ್ಯನವರ ಮಾತು ಎಂದು ಕಿಚಾಯಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಾನು ಹೋದರೆ ಹೋದೇನೂ ಅಂತಾ ಕನಕದಾಸರು ಹೇಳಿರೋದು. ಕನಕದಾಸರಿಗೂ ನನಗೂ ಹೋಲಿಕೆ ಮಾಡೋಕೆ ಹೋಗಬೇಡಿ. ನಾವು ಸರ್ಕಾರ ರಚನೆ ಮಾಡಿದ್ದೇವೆ. ಸರ್ಕಾರ ಇರುವಾಗ ನಾವು ಅಂತಾ ಹೇಳಬೇಕು, ನನ್ನ ಸರ್ಕಾರ ಅಂತಾ ಅಲ್ಲ. ಹೈಕಮಾಂಡ್ ಹೇಳೋವರೆಗೆ ನಾನೇ ಮುಖ್ಯಮಂತ್ರಿ ಎಂದು ಪುನರುಚ್ಚರಿಸಿದರು.
ಈ ವೇಳೆ ಇಲ್ಲೇ ಇರೋದು ಪ್ರಾಬ್ಲಂ. ನಾನೇ ಮುಂದಿನ ಐದು ವರ್ಷ ಸಿಎಂ ಅಂದಿದ್ರರಲ್ಲ ನೀವು ಈಗೇನಂತೀರಿ ಎಂದು ಸುನೀಲ್ ಕುಮಾರ್ ಕಾಲೆಳೆದರು. ಆಗ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರಿಗೆ ನೀವು ಮೂರು ಜನರನ್ನು ಬದಲಾವಣೆ ಮಾಡಿದ್ರಲ್ಲ?. ಈವಾಗ್ಲೂ ನಾನೇ ಮುಖ್ಯಮಂತ್ರಿ, ಮುಂದೆನೂ ಮುಖ್ಯಮಂತ್ರಿ ಎಂದು ಸಿಎಂ ಸ್ಪಷ್ಟಪಡಿಸಿದರು.


