ಧರ್ಮಸ್ಥಳದ ನೂರಾರು ಶವಗಳ ಹೂತಿಟ್ಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ ಶಿವಮೊಗ್ಗ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೆ ಎಂದು ಹೇಳಿಕೆ ನೀಡಿ ದೇಶಾದ್ಯಂತ ಸಂಚಲನಕ್ಕೆ ಕಾರಣರಾಗಿದ್ದ ಚೆನ್ನಯ್ಯ ಅವರನ್ನು ಎಸ್ ಐಟಿ ಪೊಲೀಸರು ಷಡ್ಯಂತ್ರದ ಆರೋಪದ ಮೇಲೆ ಬಂಧಿಸಿದ್ದರು.
ಮಂಡ್ಯ ತಾಲೂಕಿನ ಚಿಕ್ಕಬಳ್ಳಿ ನಿವಾಸಿ ಚೆನ್ನಯ್ಯರನ್ನು ಸುರಕ್ಷತೆ ದೃಷ್ಟಿಯಿಂದ ಶಿವಮೊಗ್ಗದ ಸೋಗಾನೆ ಬಳಿ ಇರುವ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದ್ದು, ಚೆನ್ನಯ್ಯ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಸೆಪ್ಟೆಂಬರ್ 9 ರಂದು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಬೆಳ್ತಂಗಡಿ ಜೆಎಂಎಫ್‌ಸಿ ಕೋರ್ಟ್ ಅದೇಶದ ಹಿನ್ನಲೆ ಶಿಫ್ಟ್ ಆಗಿದ್ದ ಚಿನ್ನಯ್ಯ ಕಾರಾಗೃಹದ ಕಾವೇರಿ ಬ್ಯಾರಕ್‌ನಲ್ಲಿದ್ದರು. ನವೆಂಬರ್ 24 ರಂದು ಬೆಳ್ತಂಗಡಿ ನ್ಯಾಯಾಲಯ 12 ಷರತ್ತು ವಿಧಿಸಿ ಒಂದು ಲಕ್ಷ ಬಾಂಡ್ ಇಬ್ಬರು ಸ್ಥಳೀಯರು ಶ್ಯೂರಿಟಿ ಪಡೆಯಬೇಕು ಎಂದು ಜಾಮೀನು ಮಂಜೂರು ಮಾಡಿತ್ತು. ಜಾಮೀನು ಮಂಜೂರಾಗಿ 24 ದಿನ ಕಳೆದರೂ ಶ್ಯೂರಿಟಿ ನೀಡಲು ಯಾರು ಮುಂದೆ ಬಾರದ ಕಾರಣ ಚಿನ್ನಯ್ಯ ಬಿಡುಗಡೆಯಾಗಿರಲಿಲ್ಲ. ಕೊನೆಗೂ ಶ್ಯೂರಿಟಿ ದೊರೆತ ಹಿನ್ನೆಲೆಯಲ್ಲಿ ಜಾಮೀನು ಮಂಜೂರು ಮಾಡಲಾಗಿತ್ತು.
ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಕಾರಿನಲ್ಲಿ ಚಿನ್ನಯ್ಯನ ಪತ್ನಿ ಮಲ್ಲಿಕಾ ಸೇರಿದಂತೆ ಐದು ಜನರು ಆಗಮಿಸಿದ್ದರು, ಕ್ಯಾಮೆರಾಗಳನ್ನು ನೋಡುತ್ತಿದ್ದಂತೆ ಚಿನ್ನಯ್ಯನ ಪತ್ನಿ ತಲೆಮೇಲೆ ಸೆರಗು ಮುಚ್ಚಿಕೊಂಡು ಜೈಲಿನೊಳಗೆ ಹೋಗಿ ಬಿಡುಗಡೆ ಪ್ರಕ್ರಿಯೆಗಳನ್ನು ಮುಗಿಸಿ ಚಿನ್ನಯ್ಯನನ್ನು ಕರೆದುಕೊಂಡು ಹೋಗಿದ್ದಾರೆ. ಕಾರಾಗೃಹದಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ಬಿಡುಗಡೆ ಪ್ರಕ್ರಿಯೆ ನಡೆಯಿತು.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂದು ಚಿನ್ನಯ್ಯ ದೂರು ನೀಡಿದ್ದು, ಎಸ್‌ಐಟಿ ತನಿಖೆ ವೇಳೆ ಸ್ಥಳದಲ್ಲಿ ಎರಡು ಅಸ್ಥಿಪಂಜರಗಳು ಪತ್ತೆಯಾಗಿದ್ದವು.


