ಸೊಪ್ಪಿನಲ್ಲಿ ನಾನಾ ತರಹದ ಸೊಪ್ಪುಗಳಿವೆ. ದಂಟಿನ ಸೊಪ್ಪು, ಮೆಂಥ್ಯೆ ಸೊಪ್ಪು.. ಹೀಗೆ .ಆದರೆ ಹೊನೆಗೊನೆ ಸೊಪ್ಪು ಕೇಳಿದ್ದೀರಾ? ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹೆಚ್ಚಾಗಿ ಬಳಸುವ ಹೊನೆಗೊನೆ ಸೊಪ್ಪು ಸೇವಿಸುವುದರಿಂದ ಹಲವು ಪ್ರಯೋಜನಗಳಿದ್ದು, ಹಲವು ದೈಹಿಕ ಸಮಸ್ಯೆಗಳಿಗೆ ಪರಿಹಾರ ಮಾಡುವ ಮನೆ ಮದ್ದು ಕೂಡ ಆಗಿದೆ.
ಹೊನೆಗೊನೆ ಸೊಪ್ಪು ಹೋದ ಕಣ್ಣು ಬರಿಸೀತು ಎಂಬ ಗಾದೆ ಮಾತೊಂದಿದೆ. ಅನೇಕ ಕಣ್ಣಿನ ರೋಗ ನಿವಾರಣೆಗೆ ಆಯುರ್ವೇದ ಔಷಧಿಯ ಪದ್ಧತಿಯಲ್ಲಿ ಈ ಸೊಪ್ಪನ್ನು ವ್ಯಾಪಕವಾಗಿ ಉಪಯೋಗಿಸುತ್ತಾರೆ. ಇದರ ಸಾರು, ಹುಳಿಯನ್ನು ನೆಗಡಿ-ಕೆಮ್ಮು ಇರುವವರು ಬಳಸುತ್ತಾರೆ.
ನಿಯಮಿತವಾಗಿ ಇದರ ಸೇವನೆಯಿಂದ ಕೈ, ಮೈ ಚರ್ಮ ಹೊಳಪು ಹೊಂದುತ್ತದೆ. ರಸದೊಂದಿಗೆ ಬೆಳ್ಳುಳ್ಳಿ ಸೇರಿಸಿ ತೆಗೆದುಕೊಂಡರೆ ಹಳೆಯ ಕೆಮ್ಮು, ಜ್ವರ, ನಿಶ್ಯಕ್ತಿ ದೂರಾಗುತ್ತದೆ. ಇದರಲ್ಲಿರುವ ನಾರಿನಾಂಶದಿಂದ ಮಲಬದ್ಧತೆಯನ್ನು ನಿವಾರಿಸುತ್ತದೆ. ಹೊನೆಗೊನೆ ಸೊಪ್ಪಿನಲ್ಲಿ ಅನೇಕ ಅನ್ನಾಂಗ, ಖನಿಜಾಂಶಗಳನ್ನು ಹೊಂದಿದೆ.
ಹೊನೆಗೊನೆ ಸೊಪ್ಪಿನ ರಸ ಮತ್ತು ಮೂಲಂಗಿ ಸೊಪ್ಪಿನ ರಸಗಳನ್ನು ಸೇರಿಸಿ ಒಂದು ತಿಂಗಳ ಕಾಲ ಸೇವಿಸುವುದರಿಂದ ಮೂಲವ್ಯಾಧಿಯ ನೋವು ಶಮನಗೊಳ್ಳುತ್ತದೆ. ಈ ಸೊಪ್ಪು ಕಣ್ಣಿನ ರೋಗಗಳಿಗೆ ಮದ್ದು. ಕಣ್ಣಿನ ಪೊರೆ, ಕಣ್ಣಿನಲ್ಲಿ ಬೆಳೆಯುವ ದುರ್ಮಾಂಸ, ಕಣ್ಣು ಸೋರುವ ಕಣ್ಣಿನ ಸೆಳೆತ ಮುಂತಾದ ತೊಂದರೆಗಳು ನಿವಾರಣೆಯಾಗುತ್ತದೆ.
ಹೊನೆಗೊನೆ ಸಸ್ಯದ ಎಲೆಯ ಪಲ್ಯ ಸೇವಿಸಿದರೆ, ಮೂಲವ್ಯಾಧಿಯ ಬಾಧೆ ನಿವಾರಣೆ ಆಗುತ್ತದೆ. ಸಾರನ್ನು ಕುಡಿಯುವುದರಿಂದ ಆಸನದ ಉರಿ ಶಮನಗೊಳ್ಳುತ್ತದೆ.
ಇದರ ಸೇವನೆಯಿಂದ ಬಾಣಂತಿಯರಲ್ಲಿ ಎದೆಯ ಹಾಲು ವೃದ್ಧಿ ಆಗುತ್ತದೆ. ಹೊನೆಗೊನೆ ಸಸ್ಯದ ಎಲೆಗಳಿಂದ ಕಾಡಿಗೆಯನ್ನು ತಯಾರಿಸಿ ಕಣ್ಣಿಗೆ ಹೆಚ್ಚುವುದರಿಂದ ಕಣ್ಣಿನ ರೆಪ್ಪೆಯ ನವೆ ಕಡಿಮೆ ಆಗುತ್ತದೆ ಮತ್ತು ಕಣ್ಣಿನ ಕಾಂತಿ ಹೆಚ್ಚುತ್ತದೆ.