ಚಿತ್ರದುರ್ಗ: ಖಾಸಗಿ ಟ್ರಾವೆಲ್ ಬಸ್‌ಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದ್ದು, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ.
ಹಿರಿಯೂರಿನ ಜವನಗೊಂಡನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬುಧವಾರ ತಡರಾತ್ರಿ ಬೆಂಗಳೂರಿನಿಂದ ಶಿವಮೊಗ್ಗದ ಮೂಲಕ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ ಶಿರಾದಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ.
ಹಿರಿಯೂರಿನ ಜವನಗೊಂಡನಹಳ್ಳಿಯ ಗೊರ್ಲತ್ತು ಕ್ರಾಸ್ ಬಳಿ ಎದುರಿನಿಂದ ಡಿವೈಡರ್ ದಾಟಿ ಬಂದ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಂಟೇನರ್ ಲಾರಿ ಹಾಗೂ ಬಸ್ ಎರಡೂ ಬೆಂಕಿ ಹೊತ್ತಿ ಉರಿದಿವೆ. ಬಸ್ ಸಂಪೂರ್ಣವಾಗಿ ಸುಟ್ಟುಹೋಗಿದ್ದು, 5 ವರ್ಷದ ಮಗು ಸೇರಿದಂತೆ 9 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ.
ಬಸ್ನಲ್ಲಿ ಸುಮಾರು 32 ಮಂದಿ ಪ್ರಯಾಣಿಕರು ಇದ್ದರು. ಲಾರಿ ಚಾಲಕ ಕೂಡ ಸಜೀವ ದಹನವಾಗಿದ್ದಾನೆ ಎಂದು ತಿಳಿದುಬಂದಿದೆ. ಸುದ್ದಿ ತಿಳಿದ ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
“ರಾತ್ರಿ ಎರಡು ಗಂಟೆ ಸುಮಾರಿಗೆ ಬೆಂಗಳೂರಿನಿಂದ ಗೋಕರ್ಣಕ್ಕೆ ಹೋಗುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ಗೆ ಎದುರುಗಡೆಯಿಂದ ಬಂದ ಕಂಟೇನರ್ ಲಾರಿ ಅಪ್ಪಳಿಸಿದೆ. ಲಾರಿಯು ಬಸ್ನ ಡೀಸೆಲ್ ಟ್ಯಾಂಕ್ಗೆ ಹೊಡೆದಿರಬಹುದು, ಡಿಸೇಲ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಬಸ್ನ ಒಳಗಿದ್ದ ಕೆಲ ಪ್ರಯಾಣಿಕರು ಹೊರಬಂದಿದ್ದಾರೆ. ಒಳಗೆ ಇದ್ದ ಎಂಟು ಜನ ಹಾಗೂ ಲಾರಿ ಚಾಲಕ ಸೇರಿ ಒಟ್ಟು 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ” ಎಂದು ಪೂರ್ವ ವಲಯ ಐಜಿಪಿ ರವಿಕಾಂತೇಗೌಡ ತಿಳಿಸಿದ್ದಾರೆ.
’12 ಜನ ಗಾಯಳುಗಳು ಹಿರಿಯೂರು ಆಸ್ಪತ್ರೆ, 9 ಜನ ಶಿರಾ ಆಸ್ಪತ್ರೆ ಹಾಗೂ ಮೂವರು ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ಪ್ರಯಾಣಿಕನಿಗೆ ಹೆಚ್ಚು ಸುಟ್ಟ ಗಾಯಗಳಾದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಆಗಿರುವ ಪ್ರಯಾಣಿಕನ ಹೊರತಾಗಿ ಒಟ್ಟು 24 ಜನರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಬಸ್ನಲ್ಲಿದ್ದ 32 ಜನ ಪೈಕಿ 8 ಜನರ ಜೊತೆಗೆ ಪುಟ್ಟ ಮಗುವಿನ ಶವ ಇದೆ ಎಂದು ತಿಳಿದಿದೆ. ಮೃತರ ಡಿಎನ್ಎ ಪರೀಕ್ಷೆ ಮಾಡಲಾಗುತ್ತದೆ. ಬಳಿಕ ಶವಗಳನ್ನು ಹಸ್ತಾಂತರ ಮಾಡುತ್ತೇವೆ” ಎಂದರು.
42 ಜನ ಮಕ್ಕಳಿದ್ದ ಬಸ್ ಸೇಫ್
”ಇದೇ ಸಂದರ್ಭದಲ್ಲಿ, ಅಪಘಾತವಾಗಿ ಸುಟ್ಟು ಕರಕಲಾಗಿರುವ ಬಸ್ ಸರಿಸಮವಾಗಿ ಚಲಿಸುತ್ತಿದ್ದ ಶಾಲಾ ಮಕ್ಕಳ ಪ್ರವಾಸದ ಬಸ್ ದಾಂಡೇಲಿಗೆ ತೆರಳುತ್ತಿತ್ತು. ಅಪಘಾತವಾದ ಬಸ್ ಮಕ್ಕಳ ಬಸ್‌ಗೆ ಟಚ್ ಆಗಿದೆ. ಇದರಿಂದ ಮಕ್ಕಳಿದ್ದ ಬಸ್ ರಾಷ್ಟ್ರೀಯ ಹೆದ್ದಾರಿ ದಾಟಿ, ಚರಂಡಿಗೆ ಹೋಗಿ ನಿಂತಿದೆ. ಅ ಬಸ್ನಲ್ಲಿದ್ದ 42 ಮಕ್ಕಳು ಸುರಕ್ಷಿತವಾಗಿದ್ದಾರೆ. ಮಕ್ಕಳಿದ್ದ ಬಸ್ನ ಚಾಲಕ, ಘಟನೆಯ ಪ್ರತ್ಯಕ್ಷದರ್ಶಿಗಳಿಂದ ಹೇಳಿಕೆಗಳನ್ನು ಪಡೆದಿದ್ದೇವೆ” ಎಂದು ಐಜಿಪಿ ರವಿಕಾಂತೇಗೌಡ ಹೇಳಿದರು.
”ರಾತ್ರಿ ಬೆಂಗಳೂರಿನಿಂದ ಗೋಕರ್ಣಕ್ಕೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ. ಎದುರುಗಡೆಯಿಂದ ಲಾರಿ ಬಂದು ಬಸ್‌ಗೆ ಡಿಕ್ಕಿಯಾದ ಪರಿಣಾಮ ಈ ಅಪಘಾತ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ. ಘಟನೆಯಲ್ಲಿ ಲಾರಿ ಚಾಲಕನೂ ಸಾವನ್ನಪ್ಪಿದ್ದು, ಮೃತದೇಹವನ್ನು ಆಸ್ಪತ್ರೆ ಶವಗಾರಕ್ಕೆ ಶಿಫ್ಟ್ ಮಾಡಲಾಗಿದೆ. 12 ಜನ ಗಾಯಗಳುಗಳು ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 9 ಜನ ತುಮಕೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 30ಕ್ಕೂ ಅಧಿಕ ಪ್ರಯಾಣಿಕರು ಬಸ್ಸಿನಲ್ಲಿದ್ದರು ಎಂಬ ಮಾಹಿತಿ ಇದೆ. ಇದು ಲಾರಿ ಚಾಲಕನ ಅಜಾಗರೂಕತೆಯಿಂದ ಆಗಿದೆ. ಮೃತದೇಹಗಳನ್ನು ಗುರುತಿಸುವ ಕೆಲಸ ಆಗಬೇಕಿದೆ. ಎಷ್ಟು ಜನರು ಮೃತರಾಗಿದ್ದಾರೆ ಎಂಬುದು ಇನ್ನೂ ತಿಳಿದುಬರಬೇಕಿದೆ.



