ಪದವಿಗೂ ಮುನ್ನ ಮೆಡಿಕಲ್ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ನಡೆಸುವ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಉತ್ತರ ನೀಡಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.
ನೀಟ್ ಪರೀಕ್ಷೆ 2024 ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಅಸಾಸುದ್ದೀನ್ ಅಮಾನುಲ್ಲಾ ನೇತೃತ್ವದ ವಿಭಾಗೀಯ ಪೀಠ, ಇದು ನೋಡಿದಷ್ಟು ಸುಲಭ ಇಲ್ಲ. ಏಕೆಂದರೆ ನೀವು ಪರೀಕ್ಷೆಯನ್ನು ಮುಗಿಸಿದ್ದೀರಿ. ಪರೀಕ್ಷಾ ಅಕ್ರಮದಿಂದ ನೀಟ್ ಪಾವಿತ್ರತೆಗೆ ಧಕ್ಕೆ ಬಂದಿದೆ. ಆದ್ದರಿಂದ ನಮಗೆ ಉತ್ತರ ಬೇಕು ಎಂದು ಹೇಳಿದೆ.
ನೀಟ್ ಕೌನ್ಸಿಲಿಂಗ್ ಮುಂದುವರಿಸಬಹುದಾಗಿದೆ. ನಾವು ಕೌನ್ಸಿಂಗ್ ತಡೆ ಹಿಡಿದು ತೊಂದರೆ ನೀಡುವುದಿಲ್ಲ ಎಂದು ಇದೇ ವೇಳೆ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಮೇ 5ರಂದು ಪ್ರಕಟಿಸಲಾದ ನೀಟ್ ಪರೀಕ್ಷೆಯ ಫಲಿತಾಂಶವನ್ನು ರದ್ದುಗೊಳಿಸುವಂತೆ ಕೋರಿ ತೆಲಂಗಾಣ ಮತ್ತು ಆಂಧ್ರಪ್ರದೇಶದ ಅರ್ಜಿದಾರರು ಮನವಿ ಸಲ್ಲಿಸಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಪಿಯುಸಿಯಲ್ಲಿ ಫೇಲಾದ ವಿದ್ಯಾರ್ಥಿಗಳು ನೀಟ್ ನಲ್ಲಿ ಗರಿಷ್ಠ ಅಂಕ ಗಳಿಸಿದ್ದಾರೆ.ಅದರಲ್ಲೂ ಕೆಲವರು 720ಕ್ಕೆ 720 ಅಂಕ ಪಡೆದಿರುವುದು ಅಚ್ಚರಿ ಆಗಿದೆ ಎಂದು ವಿವರಿಸಿದ್ದಾರೆ.
ಗುಜರಾತ್ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರದಿಂದಲೇ 14 ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅದರಲ್ಲೂ ಕೆಲವರು ಬಯೋಲಾಜಿ ಮತ್ತು ಫಿಜಿಕ್ಸ್ ಮುಂತಾದ ವಿಷಯಗಳಲ್ಲೇ ಫೇಲ್ ಆಗಿದ್ದರೂ 700ಕ್ಕೂ ಅಧಿಕ ಪಡೆದಿರುವುದು ಪರೀಕ್ಷಾ ಅಕ್ರಮಕ್ಕೆ ಸಾಕ್ಷಿ ಎಂದು ದೂರಿನಲ್ಲಿ ವಿವರಿಸಿದ್ದಾರೆ.