ಎರಡು ಬಾರಿಯ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾಗಿ ಬುಧವಾರ ದೆಹಲಿಯ ತಮ್ಮ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಸ್ವಾರ್ಥಿ ಅಲ್ಲ. ನನ್ನ ಕರ್ನಾಟಕ ಮಾತ್ರವಲ್ಲ ಇಡೀ ದೇಶದ ಪರವಾಗಿ ಕೆಲಸ ಮಾಡುತ್ತೇನೆ ಎಂದರು.
ಜಗತ್ತಿನ ಅತೀ ದೊಡ್ಡ ಕಂಪನಿಗಳಲ್ಲಿ ಒಂದಾಗಿರುವ ಇಲಾನ್ ಮಸ್ಕ್ ಒಡೆತನದ ಟೆಲ್ಸಾ ಕಂಪನಿ ಕರ್ನಾಟಕದಲ್ಲಿ ಆರಂಭಿಸುವ ಪ್ರಸ್ತಾಪ ಇದೆಯಾ ಎಂಬ ಪ್ರಶ್ನೆಗೆ ಹೌದು, ಟೆಲ್ಸಾ ಕಂಪನಿ ಕರ್ನಾಟಕಕ್ಕೆ ಬರುವ ಬಗ್ಗೆ ಪ್ರಸ್ತಾಪ ಇದೆ. ಆದರೆ ಈ ಬಗ್ಗೆ ಇನ್ನಷ್ಟೇ ಗಮನ ಹರಿಸಬೇಕಾಗಿದೆ ಎಂದರು.
ನನ್ನ ಕಾಳಜಿ ಏನೆಂದರೆ ದೇಶವನ್ನು ಅಭಿವೃದ್ದಿಪಡಿಸುವುದು. ನಾನು ಸ್ವಾರ್ಥಿಯಾಗಿ ಕೆಲಸ ಮಾಡುವುದಿಲ್ಲ. ಒಂದು ರಾಜ್ಯಕ್ಕೆ ಸೀಮಿತವಾಗಿ ಕೆಲಸ ಮಾಡಲು ಬಯಸುವುದಿಲ್ಲ. ದೇಶದ ಅಭಿವೃದ್ದಿ ದೃಷ್ಟಿಯಿಂದ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಟೆಲ್ಸಾ ಕಂಪನಿ ಸಿಇಒ ಇಲಾನ್ ಮಸ್ಕ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದರು. ಅಲ್ಲದೇ ಭಾರತದಲ್ಲಿ ತನ್ನ ಕಂಪನಿಯ ಶಾಖೆ ತೆರೆಯುವ ಉತ್ಸಾಹ ವ್ಯಕ್ತಪಡಿಸಿದ್ದರು.