ಹಿಟ್ ಅಂಡ್ ರನ್ ಪ್ರಕರಣದಲ್ಲಿ 82 ವರ್ಷದ ವೃದ್ಧನ ಸಾವು ಪ್ರಕರಣದ ತನಿಖೆ ನಡೆಸಿದ ಮಹಾರಾಷ್ಟ್ರದ ನಾಗ್ಪುರ ಪೊಲೀಸರು 300 ಕೋಟಿ ರೂ. ಆಸ್ತಿಗಾಗಿ ಸೊಸೆ ಸುಪಾರಿ ನೀಡಿ ಕೊಲೆ ಮಾಡಿಸಿರುವುದು ಪತ್ತೆ ಹಚ್ಚಿದ್ದಾರೆ.
ನಗರದ ಟೌನ್ ಪ್ಲಾನಿಂಗ್ ಸಂಸ್ಥೆಯ ಸಹಾಯಕ ನಿರ್ದೇಶಕಿಯಾದ ಅರ್ಚನಾ ಮನೀಷ್ ಪುತ್ತೆವಾರ್ ಅವರನ್ನು ಮಾವ ಪುರುಷೋತ್ತಮ್ ಪುತ್ತೆವಾರ್ ಕೊಲೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಅರ್ಚನಾ ಮನೀಷ್ 1 ಕೋಟಿ ರೂ. ಸುಪಾರಿ ನೀಡಿ ರಸ್ತೆ ಅಪಘಾತದಲ್ಲಿ ಮಾವನ ಕೊಲೆಗೆ ಸಂಚು ರೂಪಿಸಿದ್ದಳು. ಯಾರಿಗೂ ಸಂಶಯ ಬಾರದಿರಲಿ ಎಂಬ ಕಾರಣಕ್ಕೆ ಸೆಕೆಂಡ್ ಹ್ಯಾಂಡ್ ಕಾರು ಬಳಸಿ ಅಪಘಾತದಲ್ಲಿ ಮಾವನನ್ನು ಕೊಲೆ ಮಾಡಿಸಿದ್ದಳು. ಈ ಮೂಲಕ ಕಂಪನಿಯ ಮೇಲೆ ತನ್ನ ಹಿಡಿತ ಸಾಧಿಸುವ ಮೂಲಕ 300 ಕೋಟಿ ಆಸ್ತಿ ಪಡೆಯಲು ಬಯಸಿದ್ದಳು.
53 ವರ್ಷದ ಅರ್ಚನಾ ತನ್ನ ಚಾಲಕ ಬಾಗ್ಡೆ ಹಾಗೂ ಮತ್ತಿಬ್ಬರ ಸಹಾಯದಿಂದ ಮಾವನ ಕೊಲೆಗೆ ಸಂಚು ರೂಪಿಸಿದ್ದಳು. ಕೊಲೆಗೆ ಬಳಸಲಾಗಿದ್ದ ಕಾರು, ಮೊಬೈಲ್ ಫೋನ್ ಹಾಗೂ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಪತ್ನಿ ಶಾಂತಲಾ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಮರಳುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹತ್ಯೆ ಮಾಡಲಾಗಿದೆ. ಅರ್ಚನಾ ಪತಿ ಹಾಗೂ ಪುರುಷೋತ್ತಮ್ ಅವರ ಪುತ್ರ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪುರುಷೋತ್ತಮ್ ಟೌನ್ ಪ್ಲಾನಿಂಗ್ ಕಮಿಟಿಯಲ್ಲಿ ಕೆಲಸ ಮಾಡುತ್ತಿದ್ದು, ಹಲವಾರು ಅಕ್ರಮ ಬಡಾವಣೆಗಳಿಗೆ ಅನುಮತಿ ನೀಡುವ ಮೂಲಕ ಅಪಾರ ಆಸ್ತಿ ಸಂಪಾದಿಸಿದ್ದರು. ಆದರೆ ಇವರ ಹಿಂದೆ ರಾಜಕೀಯ ವ್ಯಕ್ತಿಗಳ ಕೈವಾಡದ ಕುರಿತು ಯಾವುದೇ ತನಿಖೆ ನಡೆದಿಲ್ಲ.