ಅಪಾಯಕಾರಿಯಾದ ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕುರಿತು ತಜ್ಞರೊಂದಿಗೆ ಸಮಾಲೋಚಿಸಿ ನೂತನ ಕರಡು ನೀತಿ ಸಿದ್ಧಪಡಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿಂದು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ನರ್ಸಿಂಗ್ ಹೋಂ, ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ವೈದ್ಯಕೀಯ ತ್ಯಾಜ್ಯದ ವಿಲೇವಾರಿಯೂ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ದೂರುಗಳಿವೆ, ಜೊತೆಗೆ, ಮನೆಗಳಲ್ಲಿಯೇ ಬಳಸುವ ಸಿರೆಂಜ್, ಬ್ಯಾಂಡೇಜ್ ಇತ್ಯಾದಿ ವೈದ್ಯಕೀಯ ತ್ಯಾಜ್ಯವನ್ನು ಒಣ ತ್ಯಾಜ್ಯದ ಜೊತೆ ವಿಲೇವಾರಿ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಇದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಹೊಸ ನೀತಿ ತರುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಸ್ಥಳೀಯ ಸಂಸ್ಥೆ ವಿರುದ್ಧ ಮೊಕದ್ದಮೆ ದಾಖಲಿಗೆ ಸೂಚನೆ:
ಸ್ಪಷ್ಟ ಸೂಚನೆ, ನೋಟಿಸ್ ಗಳ ಹೊರತಾಗಿಯೂ ತ್ಯಾಜ್ಯ ಜಲ ಸಂಸ್ಕರಿಸಲು ಎಸ್.ಟಿ.ಪಿ. ಅಳವಡಿಸದ ಹಾಗೂ ಅಳವಡಿಸಲಾದ ಎಸ್.ಟಿ.ಪಿ. ಕಾರ್ಯ ನಿರ್ವಹಸದೆ ಇರುವ ಬಗ್ಗೆ ದೂರುಗಳಿದ್ದು, ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಿತವಾಗಿ ಪರಿಶೀಲನೆ ನಡೆಸಿ ಸಂಬಂಧಿತ ಸ್ಥಳೀಯ ಸಂಸ್ಥೆಗಳ ವಿರುದ್ಧ ಮೊಕದ್ದಮೆ ದೂಖಲಿಸುವಂತೆ ಸೂಚನೆ ನೀಡಿದರು.
ಕೆರೆ, ಕಟ್ಟೆ, ಸರೋವರಗಳಿಗೆ ಸೂಕ್ತವಾಗಿ ಸಂಸ್ಕರಣೆಯಾಗದ ತ್ಯಾಜ್ಯ ಜಲ ಸೇರುತ್ತಿರುವುದರಿಂದ ಜಲ ಮಾಲಿನ್ಯ ಆಗುತ್ತಿದ್ದು, ಜಲಚರಗಳ ಸಾವಿಗೂ ಕಾರಣವಾಗುತ್ತಿದೆ ಈ ಹಿನ್ನೆಲೆಯಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ (ಎಸ್.ಟಿ.ಪಿ.)ಗಳ ಸಮರ್ಪಕ ಕಾರ್ಯ ನಿರ್ವಹಣೆಯನ್ನು ಖಾತ್ರಿ ಪಡಿಸಿಕೊಳ್ಳುವಂತೆ ಸೂಚನೆ ನೀಡಿದರು.