ಕೇರಳದ ವಯನಾಡು ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುವ ಸಾಧ್ಯತೆ ಇದ್ದು, ಈ ಮೂಲಕ ಗಾಂಧಿ ಕುಟುಂಬದ ಮತ್ತೊಂದು ಕುಡಿ ಕಾಂಗ್ರೆಸ್ ಪಕ್ಷದಿಂದ ಸಕ್ರಿಯ ರಾಜಕಾರಣಕ್ಕೆ ಧುಮುಕುವುದು ದೃಢಪಟ್ಟಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.
2014 ಲೋಕಸಭಾ ಚುನಾವಣೆಯಲ್ಲಿ ಕೊನೆಯ ಗಳಿಗೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಪ್ರಿಯಾಂಕಾ ಗಾಂಧಿ ವಯನಾಡು ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಡ ಹೆಚ್ಚಾಗಿದ್ದು, ಪ್ರಿಯಾಂಕಾ ಗಾಂಧಿ ನಿರ್ಧಾರದ ಮೇಲೆ ಕಣಕ್ಕಿಳಿಯುದು ನಿರ್ಧಾರವಾಗಲಿದೆ.
ವಯನಾಡು ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ಕಾರ್ಯಕರ್ತರು ಪ್ರಿಯಾಂಕಾ ಗಾಂಧಿ ಬ್ಯಾನರ್ ಹಾಕಿ ನಮ್ಮ ಕ್ಷೇತ್ರ ವಹಿಸಿಕೊಳ್ಳಿ ಎಂದು ಮನವಿ ಸಲ್ಲಿಸಿದ್ದಾರೆ.
ರಾಹುಲ್ ಗಾಂಧಿ ವಯನಾಡು ಮತ್ತು ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಗೆದ್ದು ಬಂದಿದ್ದು, ಯಾವ ಕ್ಷೇತ್ರವನ್ನು ಬಿಟ್ಟುಕೊಡುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ವಯನಾಡು ಕ್ಷೇತ್ರದಿಂದ ರಾಹುಲ್ ಗಾಂಧಿ ಸತತ ಎರಡನೇ ಬಾರಿ ಗೆಲುವು ಸಾಧಿಸಿದ್ದು, ಈ ಬಾರಿ ಸೋದರಿ ಪ್ರಿಯಾಂಕಾ ಗಾಂಧಿಗೆ ಬಿಟ್ಟುಕೊಡುವ ಸಾಧ್ಯತೆ ಇದೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪ್ರಿಯಾಂಕಾ ಸ್ಪರ್ಧಿಸಿದ್ದರೆ ಪ್ರಧಾನಿ ನರೇಂದ್ರ ಮೋದಿ 2-3 ಲಕ್ಷ ಮತಗಳ ಅಂತರದಿಂದ ಸೋಲುತ್ತಿದ್ದರು ಎಂದು ಕೆಲವು ದಿನಗಳ ಹಿಂದೆಯಷ್ಟೇ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಈ ಮೂಲಕ ಪ್ರಿಯಾಂಕಾ ಸಕ್ರಿಯ ರಾಜಕಾರಣಕ್ಕೆ ಧುಮುಕುವ ಸುಳಿವು ನೀಡಿದ್ದರು.
ಇದೀಗ ರಾಹುಲ್ ಗಾಂಧಿ ವಯನಾಡು ಕ್ಷೇತ್ರವನ್ನು ಸೋದರಿಗೆ ಬಿಟ್ಟುಕೊಡುವ ಸಾಧ್ಯತೆ ಇದ್ದು, ಪ್ರಿಯಾಂಕಾ ಗಾಂಧಿ ಅಂತಿಮ ನಿರ್ಧಾರ ಪ್ರಕಟಿಸಬೇಕಿದೆ. ಅವರ ನಿರ್ಧಾರದ ನಂತರ ರಾಹುಲ್ ತಮ್ಮ ಕ್ಷೇತ್ರ ತೊರೆಯುವ ಪ್ರಕಟಣೆ ಹೊರಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಿಯಾಂಕಾ ಗಾಂಧಿ ತಾಯಿ ಸೋನಿಯಾ ಗಾಂಧಿ ಪರ ಪ್ರಚಾರ ಆರಂಭಿಸಿ ದಶಕಗಳೇ ಕಳೆದಿದ್ದರೂ ಇದುವರೆಗೆ ಸಕ್ರಿಯ ರಾಜಕಾರಣಕ್ಕೆ ಧುಮುಕುವ ಪ್ರಯತ್ನ ಮಾಡಿರಲಿಲ್ಲ. ಸಾಕಷ್ಟು ಒತ್ತಡಗಳು ಬಂದಿದ್ದರೂ ಸ್ಪರ್ಧೆ ನಿರಾಕರಿಸುತ್ತಲೇ ಬಂದಿದ್ದರು. ಇದೀಗ ರಾಹುಲ್ ಎರಡು ಕ್ಷೇತ್ರದಲ್ಲಿ ಗೆದ್ದಿರುವುದರಿಂದ ಪ್ರಿಯಾಂಕಾ ಈ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.