ಸಮಲತಾ ಅಂಬರೀಷ್ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದು ಕಾಂಗ್ರೆಸ್ ಮತಗಳಿಂದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಡ್ಯದಲ್ಲಿ 5 ಗ್ಯಾರಂಟಿ ಯೋಜನೆ ಕುರಿತ ಸಮಾವೇಶದಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಸುಮಲತಾ ಕಾಂಗ್ರೆಸ್ ಮತಗಳಿಂದ ಗೆದ್ದಿದ್ದರೂ ಈಗ ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ. ಇದರಿಂದ ಸುಮಲತಾ ಮತ್ತು ಜೆಡಿಎಸ್ ನಡುವೆ ಟಿಕೆಟ್ ಗಾಗಿ ತಿಕ್ಕಾಟ ನಡೆದಿದೆ ಎಂದರು.
ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಆಹಾರ ಧಾನ್ಯಗಳ ದರ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಜನರ ಸಂಕಷ್ಟ ಪರಿಹರಿಸಲು ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಇದು ಎಲ್ಲಾ ಧರ್ಮ, ಜಾತಿ, ರಾಜಕೀಯ ಪಕ್ಷಗಳಿಗೆ ದೊರೆಯುತ್ತಿದೆ.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಾಗಿ 4 ಕೋಟಿ 60 ಲಕ್ಷ ರೂ. ವೆಚ್ಚ ಮಾಡಲಿದೆ. 36 ಸಾವಿರ ಕೋಟಿ ರೂ. ವೆಚ್ಚ ಮಾಡಿದ್ದು, ಮುಂದಿನ ವರ್ಷ ಬಜೆಟ್ 59 ಸಾವಿರ ಕೋಟಿ ರೂ. ನೀಡುತ್ತಿದ್ದೇವೆ ಎಂದು ಅವರು ಹೇಳಿದರು.
ಮೈ ಶುಗರ್ ಕಾರ್ಖಾನೆ ನಷ್ಟದಲ್ಲಿದೆ. 25 ಕೋಟಿ ಕೇಳಿದ್ದರು. ಆದರೆ ಕೂಡಲೇ 50 ಕೋಟಿ ರೂ. ಬಿಡುಗಡೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಮಂಡ್ಯದಲ್ಲಿ ಹೊಸದಾಗಿ ಸಕ್ಕರೆ ಕಾರ್ಖಾನೆ ಆರಂಭಿಸಲು ತೀರ್ಮಾನ ಮಾಡಿದ್ದೇನೆ. ರೈತರಿಗೆ ಏನು ಮಾಡದೇ ಇರುವವರು ಮಣ್ಣಿನ ಮಕ್ಕಳು ಎಂದು ಕರೆದುಕೊಳ್ಳುತ್ತಾರೆ. ಆದರೆ ನಾವು ರೈತರಿಗೆ ಸಾಕಷ್ಟು ಯೋಜನೆಗಳನ್ನು ನೀಡಿದ್ದರೂ ಮಣ್ಣಿನ ಮಕ್ಕಳು ಅಲ್ಲ ಅಂತಾರೆ ಎಂದು ಸಿದ್ದರಾಮಯ್ಯ ಹೇಳಿದರು.