ಕಾಂಚನ್ ಜುಂಗ ಎಕ್ಸ್ ಪ್ರೆಸ್ ರೈಲಿಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ 8 ಪ್ರಯಾಣಿಕರು ಮೃತಪಟ್ಟು 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಭೀಕರ ಘಟನೆ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದೆ.
ಪ್ರೇಕ್ಷಣಿಯ ಸ್ಥಳವಾದ ಡಾರ್ಜಲಿಂಗ್ ಜಿಲ್ಲೆಯ ಫನ್ಸಿಡೇವಾ ಎಂಬಲ್ಲಿ ಸೋಮವಾರ ಮುಂಜಾನೆ ಈ ದುರಂತ ಸಂಭವಿಸಿದ್ದು, ಎರಡೂ ರೈಲುಗಳ ಬೋಗಿಗಳು ಹಾನಿಗೊಳಗಾಗಿವೆ.
ಕಾಂಚನ್ ಜುಂಗಾ ರೈಲಿನ ಮೂರು ಹಳಿಗಳು ಅಪಘಾತದ ತೀವ್ರತೆಗೆ ಹಳಿ ತಪ್ಪಿದೆ. ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ರಕ್ಷಣಾ ಕಾರ್ಯಚರಣೆ ಮುಗಿದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಜಯ ವರ್ಮಾ ಸಿನ್ಹಾ ತಿಳಿಸಿದ್ದಾರೆ.
ಕಾಂಚನಜುಂಗಾ ರೈಲು ಈಶಾನ್ಯ ಭಾರತದ ಅಸ್ಸಾಂನ ಸಿಲಿಚಾರ್ ಮತ್ತು ಕೋಲ್ಕತಾದ ಅಗರ್ತಲಾ ನಗರಗಳ ನಡುವೆ ಸಂಚರಿಸುತ್ತದೆ. ಜಲಪುರಿ ನಗರದ ರಂಗಪಾನಿ ರೈಲ್ವೆ ನಿಲ್ದಾಣದ ಬಳಿ ಈ ದುರಂತ ಸಂಭವಿಸಿದೆ.
ಘಟನೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ಘಟನೆಯ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ. ಘಟನೆ ಬಗ್ಗೆ ಈಗಷ್ಟೇ ಮಾಹಿತಿ ಬಂದಿದ್ದು, ಆಘಾತವಾಗಿದೆ. ಪರಿಹಾರ ಕಾರ್ಯಗಳಿಗೆ ತಕ್ಷಣ ಸ್ಪಂದಿಸುವಂತೆ ಸೂಚಿಸಿದ್ದೇನೆ ಎಂದರು.