ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದಾಗ ಪೆಟ್ರೋಲ್ ಮೇಲೆ ಕೇಂದ್ರ ಅಬಕಾರಿ ಸುಂಕ 9.48 ರೂಗಳಷ್ಟಿತ್ತು. 2020ರ ಮೇನಲ್ಲಿ 32.98 ರೂ.ಗಳಿಗೆ ಹೆಚ್ಚಾಗಿದೆ. ಆಗ ಬಿಜೆಪಿಯವರು ಯಾರೂ ಬಾಯಿ ಬಿಡಲೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಅವರು, ಇದರಿಂದ ಸರ್ಕಾರದ ಬೊಕ್ಕಸಕ್ಕೆ 3000 ಕೋಟಿ ರೂ. ಆದಾಯ ಬರಲಿದೆ. ಬರಗಾಲದ ಬಗ್ಗೆ ಪರಿಹಾರ ತೆಗೆದುಕೊಳ್ಳಲು ಕೋರ್ಟಿಗೆ ಹೋಗಬೇಕಾಗಿ ಬಂತು. ಕೋರ್ಟು ಸೂಚನೆ ನೀಡಿದ ನಂತರ 18 ಸಾವಿರ ಕೋಟಿ ಕೇಳಿದರೆ 3454 ಕೋಟಿ ರೂ. ಪರಿಹಾರ ನೀಡಿದ್ದಾರೆ.
ತೈಲ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡ ಮುಖ್ಯಮಂತ್ರಿಯವರು, ಬೆಲೆ ಏರಿಕೆಯ ಹೊರತಾಗಿಯೂ ರಾಜ್ಯದ ಪೆಟ್ರೋಲ್, ಡೀಸೆಲ್ ಬೆಲೆ ನೆರೆಯ ರಾಜ್ಯಗಳು ಹಾಗೂ ಬಿಜೆಪಿ ಆಡಳಿತದ ರಾಜ್ಯಗಳಿಗಿಂತ ಕಡಿಮೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರ ನಮ್ಮ ಪಾಲಿನ ತೆರಿಗೆ ಪಾಲನ್ನು ಸರಿಯಾಗಿ ನೀಡಿದ್ದರೆ ನಾವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಬೇಕಾದ ಅವಶ್ಯಕತೆ ಇರುತ್ತಿರಲಿಲ್ಲ. ಗ್ಯಾರಂಟಿ ಯೋಜನೆಗಳಿಗೆ 60000 ಕೋಟಿ ಬೇಕು. ಯಾರಿಗೆ ಕೊಡುತ್ತಾ ಇದ್ದೇವೆ? ಶ್ರೀಮಂತರಿಗೆ ಕೊಡುತ್ತಾ ಇದ್ದೀವಾ? ಅಂಬಾನಿ, ಅದಾನಿಗಳಿಗೆ ಸಾಲ ಮನ್ನಾ ಮಾಡ್ತಾ ಇದ್ದೀವಾ? ರೈತರ ಸಾಲ ಮನ್ನ ಮಾಡಿ ಎಂದರೆ ಒಂದು ರೂಪಾಯಿ ಸಾಲ ಮನ್ನಾ ಮಾಡಿಲ್ಲ. ಇವರಿಗೆ ನಮ್ಮನ್ನು ಪ್ರಶ್ನಿಸುವ ನೈತಿಕತೆ ಇದೆಯೇ ಎಂದು ಟೀಕಿಸಿದರು.
ಮೋದಿ ಸರ್ಕಾರ ಅಧಿಕಾರದಲ್ಲಿದ್ದಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನ ಬ್ಯಾರೆಲ್ ಬೆಲೆ 40 ಡಾಲರ್ ಗೆ ಇಳಿದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಸಲಿಲ್ಲ. ಯುಪಿಎ ಸರ್ಕಾರ ಇದ್ದಾಗ ಬ್ಯಾರೆಲ್ ಬೆಲೆ 110 ಡಾಲರ್ ಆದರೂ 75 ರೂ. ದಾಟಿರಲಿಲ್ಲ. ಮೋದಿ ತೆರಿಗೆ ಹೆಚ್ಚಿಸಿದ್ದು ಈ ಬಿಜೆಪಿ ನಾಯಕರಿಗೆ ಗೊತ್ತಿರಲಿಲ್ಲವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
2015 ರ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಅರ್ಧಕ್ಕರ್ಧ ಕಡಿಮೆ ಆದಾಗಲೂ ಅವರ ಲಾಭವನ್ನು ದೇಶದ ಜನರಿಗೆ ನೀಡದೆ ಮೋದಿ ಸರ್ಕಾರ ಇಂಧನ ಬೆಲೆಯನ್ನು ನಿರಂತರವಾಗಿ ಏರಿಸುತ್ತಾ ಹೋಗಿದ್ದರ ಅಂಕಿ ಅಂಶಗಳನ್ನು ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.