ರೊಮೆನಿಯಾ ತಂಡ ಯುರೋ ಕಪ್ ಪಂದ್ಯದಲ್ಲಿ 3-0 ಗೋಲುಗಳಿಂದ ಉಕ್ರೇನ್ ತಂಡವನ್ನು ಸೋಲಿಸಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ಫುಟ್ಬಾಲ್ ಟೂರ್ನಿಯಲ್ಲಿ 24 ವರ್ಷಗಳ ನಂತರ ಮೊದಲ ಗೆಲುವು ದಾಖಲಿಸಿದ ಐತಿಹಾಸಿಕ ಸಾಧನೆ ಮಾಡಿದೆ.
ಮ್ಯೂನಿಚ್ ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಇ ಗುಂಪಿನ ಮೊದಲ ಪಂದ್ಯದಲ್ಲಿ ಉಕ್ರೇನ್ ತಂಡದ ಗೋಲಿ ಆಂಡ್ರಿಯಾ ಲುನಿನ್ ಎರಡು ಎಡವಟ್ಟುಗಳಿಂದ ಗೋಲು ಬಿಟ್ಟುಕೊಟ್ಟಿತು. ಇದರ ಲಾಭ ಪಡೆದ ರೊಮೆನಿಯಾ ಸುಲಭ ಗೆಲುವು ದಾಖಲಿಸಿತು.
ತಪ್ಪುಗಳಿಂದ ಉಕ್ರೇನ್ ಆಟಗಾರರು ಗೆಲುವಿನ ಅವಕಾಶ ಕೈ ಚೆಲ್ಲಿದರೆ, ರೊಮೆನಿಯಾ ಪರ ನಾಯಕ ನಿಕೊಲಸ್ ಸ್ಟಾನಿಕ್ ದೂರದಿಂದ ಸಿಡಿಸಿದ (29ನೇ ನಿಮಿಷ), ಗೋಲು ಹಾಗೂ ರಜ್ವನ್ ಮಾರ್ಟಿನ್ (53ನೇ ನಿಮಿಷ) ಮತ್ತು ಡೇನಿಸ್ ಡ್ರಾಗಸ್ (57ನೇ ನಿಮಿಷ) ತಲಾ ಒಂದು ಗೋಲು ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
2022 ಫೆಬ್ರವರಿಯಲ್ಲಿ ರಷ್ಯಾ ದಾಳಿ ಖಂಡಿಸಿ ಉಕ್ರೇನ್ ಆಟಗಾರರು ಪಂದ್ಯದ ಆರಂಭಕ್ಕೂ ಮುನ್ನ ಮೈದಾನದಲ್ಲಿ ರಾಷ್ಟ್ರಧ್ವಜವನ್ನು ಧರಿಸಿದ್ದರು.ಕಳೆದ ಎರಡು ವರ್ಷಗಳ ಹಿಂದೆ ನಡೆದ ವಿಶ್ವಕಪ್ ಗೆ ಅರ್ಹತೆ ಪಡೆಯಲು ವಿಫಲವಾಗಿದ್ದರೂ ಉಕ್ರೇನ್ ಯುರೋ ಕಪ್ ನಲ್ಲಿ ಸತತ ನಾಲ್ಕನೇ ಬಾರಿ ಪ್ರಮುಖ ಘಟ್ಟಕ್ಕೆ ಪ್ರವೇಶಿಸಿದ ಸಾಧನೆ ಮಾಡಿದೆ.