ಶ್ರೀಲಂಕಾ ತಂಡದ ಮಾಜಿ ಕ್ರಿಕೆಟಿಗ ಹಾಗೂ ಸ್ಪಿನ್ ದಂತಕತೆ ಮುತ್ತಯ್ಯ ಮುರಳೀಧರನ್ ಕರ್ನಾಟಕದ ಗಡಿ ಜಿಲ್ಲೆಯಾದ ಚಾಮರಾಜನಗರದಲ್ಲಿ 1400 ಕೋಟಿ ರೂ. ಹೂಡಿಕೆ ಮಾಡಿ ತಮ್ಮ ಉದ್ಯಮ ಸ್ಥಾಪಿಸಲು ಮುಂದಾಗಿದ್ದಾರೆ.
ಆಹಾರೋದ್ಯಮವಾದ ತಂಪು ಪಾನೀಯ ಹಾಗೂ ಸಿಹಿ ತಿಂಡಿಗಳಿಗೆ ಸಂಬಂಧಿಸಿದ ಉದ್ಯಮ ಸ್ಥಾಪಿಸುತ್ತಿದ್ದು, ಚಾಮರಾಜನಗರದ ಬದನಗುಪ್ಪೆಯಲ್ಲಿ ಘಟಕ ಸ್ಥಾಪಿಸಲಿದ್ದಾರೆ.
ಮಂಗಳವಾರ ಕರ್ನಾಟಕದ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ ಮುತ್ತಯ್ಯ ಮುರಳೀಧರನ್ ಚಾಮರಾಜನಗರದಲ್ಲಿ ಉದ್ಯಮ ಸ್ಥಾಪಿಸುವ ಕುರಿತು ಚರ್ಚೆ ನಡೆಸಿದರು.
ಸಚಿವರ ಜೊತೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುತ್ತಯ್ಯ ಮುರಳೀಧರನ್, ‘ಮುತ್ತಯ್ಯ ಬ್ರಿವರೇಜಸ್ ಮತ್ತು ಕನ್ಫೆಕ್ಷನರೀಸ್’ ಎನ್ನುವ ಬ್ರ್ಯಾಂಡ್ ನಲ್ಲಿ ತಮ್ಮ ಉದ್ದಿಮೆ ಆರಂಭಿಸುತ್ತಿದ್ದು, ಆರಂಭದಲ್ಲಿ 230 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದೇವೆ. ನಂತರ ಹಂತ ಹಂತವಾಗಿ 1400 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಲಾಗುವುದು ಎಂದರು.
ಈಗಾಗಲೇ 46 ಎಕರೆ ಭೂಮಿ ಗುರಿತಿಸಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಕೆಲ ಸಣ್ಣಪುಟ್ಟ ತೊಡಕುಗಳಿದ್ದವು. ಅವುಗಳನ್ನು ಕೂಡಲೇ ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬದನಗುಪ್ಪೆಯಲ್ಲಿ ಮುಂಬರುವ ಜನವರಿಯಲ್ಲಿ ಉತ್ಪಾದನಾ ಚಟುವಟಿಕೆ ಆರಂಭವಾಗಲಿದೆ ಎಂದು ಸಚಿವ ಎಂಬಿ ಪಾಟೀಲ್ ನುಡಿದರು.
ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿ ಸಿಇಒ ಡಾ.ಮಹೇಶ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಸಚಿವರೊಂದಿಗೆ ಇದ್ದರು.