Friday, November 22, 2024
Google search engine
Homeತಾಜಾ ಸುದ್ದಿಹಗರಣದ ಆರೋಪದಿಂದ ಎಚ್ಚೆತ್ತ ರಾಜ್ಯ ಸರ್ಕಾರ: ವಾಲ್ಮೀಕಿ ನಿಗಮಕ್ಕೆ ಮಂಜೂರಾಗಿದ್ದ 263 ಕೋಟಿ ರೂ. ವಾಪಸ್!

ಹಗರಣದ ಆರೋಪದಿಂದ ಎಚ್ಚೆತ್ತ ರಾಜ್ಯ ಸರ್ಕಾರ: ವಾಲ್ಮೀಕಿ ನಿಗಮಕ್ಕೆ ಮಂಜೂರಾಗಿದ್ದ 263 ಕೋಟಿ ರೂ. ವಾಪಸ್!

ಹಗರಣದ ಆರೋಪದ ಹಿನ್ನೆಲೆಯಲ್ಲಿ ಎಚ್ಚೆತ್ತ ರಾಜ್ಯ ಸರ್ಕಾರ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ಮಂಜೂರಾಗಿದ್ದ 263 ಕೋಟಿ ರೂ.ಅನ್ನು ವಾಪಸ್ ಪಡೆದಿದೆ.

ಹಣಕಾಸು ಇಲಾಖೆಯ ಸೂಚನೆಯಂತೆ 2023-24 ರಲ್ಲಿ ನಿಗಮದಲ್ಲಿ ಬಳಸದೇ ಉಳಿಸಲಾಗಿದ್ದ 263 ಕೋಟಿ ರೂ.ವನ್ನು ಹಣಕಾಸು ಇಲಾಖೆ ಸರ್ಕಾರದ ಬೊಕ್ಕಸಕ್ಕೆ ವಾಪಸ್ ಜಮಾ ಮಾಡಿಕೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ಬೆಂಗಳೂರಿನಲ್ಲಿ ನಡೆದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ನಿಗಮದಿಂದ ಈ ಆರ್ಥಿಕ ವರ್ಷದಲ್ಲಿ ಯಾವುದೇ ಯೋಜನೆಯಡಿ ಫಲಾನುಭವಿಗಳ ಆಯ್ಕೆಯಾಗದೇ ಹಣ ಉಳಿಸಿಕೊಂಡಿದ್ದ ಹಿನ್ನೆಲೆಯಲ್ಲಿ ವಾಪಸ್ ಮಾಡಲು ಸೂಚಿಸಲಾಯಿತು.

ಪ್ರತಿ ವರ್ಷ ವಿವಿಧ ಯೋಜನೆಯಡಿ ಫಲಾನುಭವಿಗಳನ್ನು ಮಾಡಬೇಕಲ್ಲ. ಯಾಕೆ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದಾಗ, ಶಾಸಕರು ಫಲಾನುಭವಿಗಳ ಪಟ್ಟಿ ನೀಡಿಲ್ಲ. ಆಯ್ಕೆ ಮಾಡಬೇಕಾದ ಫಲಾನುಭವಿಗಳ ಸಂಖ್ಯೆ ಅತ್ಯಂತ ಕಡಿಮೆ ಇರುವುದರಿಂದ ಸಂದಿಗ್ಧ ಪರಿಸ್ಥಿತಿ ಎದುರಾಗುವ ಹಿನ್ನೆಲೆಯಲ್ಲಿ ಶಾಸಕರು ಆಯ್ಕೆ ಮಾಡಲು ಆಸಕ್ತಿ ತೋರಿಸುತ್ತಿಲ್ಲ ಎಂದು ತಿಳಿಸಿದರು. ಫಲಾನುಭವಿಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಇಲಾಖೆಯ ಒಟ್ಟಾರೆ ಆಯವ್ಯಯದಲ್ಲಿ ಬಿಡುಗಡೆಯಾದ ಮೊತ್ತ 1884.01 ಕೋಟಿ ರೂ. ನಲ್ಲಿ 1879.35 ಕೋಟಿ ವೆಚ್ಚವಾಗಿದ್ದು, ಶೇ.99.75 ಸಾಧನೆಯಾಗಿದೆ.ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಡಿ 389 ವಿದ್ಯಾರ್ಥಿ ನಿಲಯಗಳು, ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗಳು – 39,541 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಒದಗಿಸಿದ್ದು, 194.71 ಕೋಟಿ ರೂ. ಒದಗಿಸಲಾಗಿದೆ. ಎಸ್‌.ಎಸ್‌.ಎಲ್‌.ಸಿ. ಯಲ್ಲಿ ಶೇ. 77 ರಷ್ಟು ಫಲಿತಾಂಶ ಬಂದಿದ್ದು, ಫಲಿತಾಂಶ ಉತ್ತಮ ಪಡಿಸಲು ಸೂಚನೆ ನೀಡಿದರು.

2,90,546 ವಿದ್ಯಾರ್ಥಿಗಳಿಗೆ 50.47 ಕೋಟಿ ರೂ. ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನ ಪಾವತಿ ಮಾಡಲಾಗಿದೆ. 2,48,887 ವಿದ್ಯಾರ್ಥಿಗಳಿಗೆ 302.64 ಕೋಟಿ ರೂ. ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನ ಪಾವತಿ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಹಾಸ್ಟೆಲ್‌ಗಳಿಗೆ ಸಂಜೆ ವೇಳೆಗೆ ಭೇಟಿ ನೀಡಿ, ಶುಚಿ ಕಿಟ್‌ಗಳು, ಆಹಾರ ಪದಾರ್ಥ ವಿತರಣೆ ಸಮರ್ಪಕವಾಗಿ ಆಗುತ್ತಿದೆಯೇ ಎಂದು ಪರಿಶೀಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೆಲವು ಆದಿವಾಸಿ ಬುಡಕಟ್ಟು ವಸತಿ ಶಾಲೆಗಳಲ್ಲಿ ರಾತ್ರಿ ವೇಳೆ ಮಕ್ಕಳು ಇರುವುದಿಲ್ಲ. ಮಕ್ಕಳು ರಾತ್ರಿ ಊಟವಾದ ನಂತರ ಮನೆಗೆ ಕರೆದುಕೊಂಡು ಹೋಗುತ್ತಾರೆ. ಚಿಕ್ಕ ಮಕ್ಕಳು ಎಂದು ಮನೆಗೆ ಕರೆದುಕೊಂಡು ಹೋಗುತ್ತಾರೆ. ಎಲ್ಲ ಸೌಲಭ್ಯ ಇದ್ದೂ, ಯಾಕೆ ಮನೆಗೆ ಕರೆದುಕೊಂಡು ಹೋಗುತ್ತಾರೆ. ಈ ಕುರಿತು ಪರಾಮರ್ಶೆ ನಡೆಸಲು ಸೂಚಿಸಿದರು. ಆದಿವಾಸಿ ಬುಡಕಟ್ಟು ವಸತಿ ಶಾಲೆಗಳ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸೂಚಿಸಿದರು.

ಅನುದಾನ ಲಭ್ಯವಿದೆ ಎಂಬ ಕಾರಣಕ್ಕೆ ಬೇಡಿಕೆ ಇಲ್ಲದೆ ಇದ್ದರೂ, ಹಾಸಿಗೆ, ಬೆಡ್‌ಶೀಟ್‌ ಮತ್ತಿತರ ವಸ್ತುಗಳನ್ನು ಅನಗತ್ಯವಾಗಿ ಖರೀದಿಸುವುದನ್ನು ಸಹಿಸಲಾಗದು. ಅನಗತ್ಯವಾಗಿ 4 ಜಿ ವಿನಾಯಿತಿ ಪಡೆಯುವ ಬದಲು ನೇರವಾಗಿ ಟೆಂಡರ್‌ ಕರೆದು ಖರೀದಿ, ಸೇವೆಗಳನ್ನು ಪಡೆಯಬೇಕೆಂದು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಪರಿಶಿಷ್ಟ ಪಂಗಡದ ವಸತಿ ಶಾಲೆಗಳಲ್ಲಿ 108 ಸ್ವಂತ ಕಟ್ಟಡ ಹೊಂದಿದ್ದು, 30 ಬಾಡಿಗೆ ಕಟ್ಟಡಗಳಲ್ಲಿ ಹಾಗೂ 6 ಬಾಡಿಗೆ ರಹಿತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳೊಂದಿಗೆ ಖುದ್ದಾಗಿ ಅನುಸರಣೆ ಮಾಡುವಂತೆ ಸೂಚಿಸಿದರು.

22 ಪ್ರಕರಣಗಳಲ್ಲಿ ಸಿಂಧುತ್ವ ಪ್ರಮಾಣ ಪತ್ರ ಹಲವು ವರ್ಷಗಳಿಂದ ಇತ್ಯರ್ಥಕ್ಕೆ ಬಾಕಿ ಇದ್ದು, ಇವುಗಳಲ್ಲಿ ಎಲ್ಲ ಪ್ರಕರಣಗಳನ್ನು ಸಿ.ಆರ್.ಇ. ಸೆಲ್‌ಗೆ ಕಳುಹಿಸದಂತೆ, ಗೊಂದಲವಿದ್ದಲ್ಲಿ ಮಾತ್ರ ಕಳುಹಿಸುವಂತೆ ಸುತ್ತೋಲೆ ಹೊರಡಿಸಲು ಸೂಚಿಸಿದರು. ಮೈಸೂರಿನ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ಹಿರಿಯ ಕೆ.ಎ.ಎಸ್. ಅಧಿಕಾರಿಯನ್ನು ನಿರ್ದೇಶಕರಾಗಿ ನೇಮಕ ಮಾಡುವುದು ಸೂಕ್ತ ಎಂದು ಅಪರ ಮುಖ್ಯ ಕಾರ್ಯದರ್ಶಿಗಳು ಅಭಿಪ್ರಾಯಪಟ್ಟರು.

ಹಿರಿಯ ಕೆ.ಎ.ಎಸ್. ಅಧಿಕಾರಿಯನ್ನು ನಿರ್ದೇಶಕರನ್ನಾಗಿ ನೇಮಕ ಮಾಡಿ, ಮಾನವಶಾಸ್ತ್ರಜ್ಞರನ್ನು ಅವರ ಅಧೀನದಲ್ಲಿ ನೇಮಕಗೊಳಿಸುವ ಬಗ್ಗೆ ಪರಿಶೀಲನೆ ನಡೆಸಿ, ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು. ಕೇರಳ ಮಾದರಿಯಲ್ಲಿ ಆಡಳಿತ ಮತ್ತು ಸಂಶೋಧನಾ ವಿಭಾಗಗಳನ್ನು ಪ್ರತ್ಯೇಕವಾಗಿ ರಚಿಸುವ ಬಗ್ಗೆ ಅಥವಾ ಒಡಿಶಾ ರಾಜ್ಯದ ಮಾದರಿ ಏನು ಎಂದು ಮಾಹಿತಿ ತರಿಸಿ, ಪರಿಶೀಲಿಸುವಂತೆ ಸೂಚಿಸಿದರು.

ಆಶ್ರಮ ಶಾಲೆಗಳಲ್ಲಿ ಆಯಾ ಸಮುದಾಯದವರನ್ನೇ ಕೇರ್‌ ಟೇಕರ್‌ ಆಗಿ ನೇಮಕ ಮಾಡಿದರೆ, ಈ ಶಾಲೆಗಳು ಸಮುದಾಯಗಳಿಗೆ ಹತ್ತಿರವಾಗುವ ಸಾಧ್ಯತೆ ಇದೆ ಎಂದು ಬುಡಕಟ್ಟು ಸಂಶೋಧನಾ ಸಂಸ್ಥೆಯ ಸಂಶೋಧನಾ ಅಧಿಕಾರಿ,ಡಾ. ಕೆ.ವಿ. ಕೃಷ್ಣಮೂರ್ತಿ ಅವರು ವಿವರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments