ಇಬ್ಬರು ಮಕ್ಕಳನ್ನು ಸಿಬಿಎಸ್ ಇ ಶಾಲೆಗೆ ಸೇರಿಸುವಷ್ಟು ಹಣ ಇಲ್ಲದ ಕಾರಣ 5 ವರ್ಷದ ಮಗಳ ಜೊತೆ 26 ವರ್ಷದ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ದೇಶದಲ್ಲಿ ಶಿಕ್ಷಣ ಶುಲ್ಕ ಎಷ್ಟು ದುಬಾರಿ ಆಗಿದೆ ಎಂಬುದು ಚರ್ಚೆಯ ವಿಷಯವಾಗಿದೆ. ಖಾಸಗಿ ಶಾಲೆಗಳು ವಿಧಿಸುವ ಶುಲ್ಕ ಭರಿಸಲು ಮಧ್ಯಮ ವರ್ಗದ ಜನತೆಗೆ ಕಷ್ಟವಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಹೆತ್ತವರಿಗೆ ಕನಸಿನ ವಿಷಯವಾಗಿದೆ.
ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ಲಾಥೂರ್ ಜಿಲ್ಲೆಯ ನಿಲಾಂಗ ತೆಹ್ಸಿಲ್ ನ ಮಲೆಗಾಂವ್ ನಲ್ಲಿ ಎರಡು ದಿನಗಳ ಹಿಂದೆ ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭಾಗ್ಯಶ್ರೀ ವೆಂಕಟ್ ಹಾಲ್ಸೆ (26) ಮತ್ತು ಸಮೀಕ್ಷಾ ವೆಂಕಟ್ ಹಾಲ್ಸೆ (5) ಆತ್ಮಹತ್ಯೆ ಮಾಡಿಕೊಂಡಿದ್ದು, ಗಂಡ ಒಂದೂವರೆ ಎಕರೆ ಜಮೀನು ಹೊಂದಿದ್ದು, ಕುರಿ ಸಾಗಾಣೆ ಮೂಲಕ ಜೀವನ ನಡೆಸುತ್ತಿದ್ದಾರೆ.
ಭಾಗ್ಯಶ್ರೀ ಮಗ ಮತ್ತು ಮಗಳನ್ನು ಸಿಬಿಎಸ್ ಇ ಅನುದಾನಿತ ಶಾಲೆಗೆ ಸೇರಿಸಲು ಬಯಸಿದ್ದಳು. ಆದರೆ ಹಣದ ಕೊರತೆಯಿಂದ ಸಾಧ್ಯವಾಗದೇ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಕಳೆದ ವರ್ಷ ತಾಯಿಯನ್ನು ಕಳೆದುಕೊಂಡಿದ್ದು, ಖಿನ್ನತೆ ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಭಾಗ್ಯಶ್ರೀ ಮತ್ತೊಬ್ಬ ರೈತನ ಜಮೀನಿನಲ್ಲಿದ್ದ ಬಾವಿ ಬಳಿ ಬಂದು ಗಂಡನಿಗೆ ವೀಡಿಯೊ ಕಾಲ್ ಮಾಡಿ ಕೊನೆಯ ಬಾರಿಗೆ ಮಗಳ ಮುಖ ನೋಡುವಂತೆ ಹೇಳಿ ಇಬ್ಬರೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗನನ್ನು ಕೂಡ ಬಾವಿಗೆ ತಳ್ಳಲು ಭಾಗ್ಯಶ್ರೀ ಬಯಸಿದ್ದಳು. ಆದರೆ ಆತ ಆಯತಪ್ಪಿ ಮತ್ತೊಂದು ಕಡೆ ಬಿದ್ದಿದ್ದರಿಂದ ಪಾರಾಗಿದ್ದಾನೆ ಎಂದು ಪೊಲೀಸರು ಘಟನೆಯನ್ನು ವಿವರಿಸಿದ್ದಾರೆ.