ಕೇಂದ್ರದಲ್ಲಿ ಸತತ ಮೂರನೇ ಬಾರಿ ಅಧಿಕಾರ ಹಿಡಿಯುತ್ತಿದ್ದಂತೆ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಕೆಲವು ವಸ್ತು ಮತ್ತು ಸೇವೆಗಳ ಮೇಲಿನ ಜಿಎಸ್ ಟಿಯನ್ನು ಕಡಿತಗೊಳಿಸಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ದೆಹಲಿಯಲ್ಲಿ ಶನಿವಾರ ನಡೆದ 54ನೇ ಜಿಎಸ್ ಟಿ ಸಭೆಯಲ್ಲಿ ವಿವಿಧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದು, ಹಲವು ವಸ್ತು ಮತ್ತು ಸೇವೆಗಳ ಮೇಲಿನ ತೆರಿಗೆ ಕಡಿಮೆ ಮಾಡಲು ನಿರ್ಧರಿಸಲಾಯಿತು.
ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳ ಹೊರಗಿನ ಹಾಸ್ಟೆಲ್ ಸೌಕರ್ಯ ಪಡೆಯಲು ಮಾಸಿಕ 20,000 ರೂ.ವರೆಗೆ ವಿನಾಯಿತಿ ದೊರೆಯಲಿದೆ. ಆದರೆ ಈ ಸೌಲಭ್ಯ ಪಡೆಯಬೇಕಾದರೆ ವಿದ್ಯಾರ್ಥಿ ಸತತ 90 ದಿನಗಳ ಕಾಲ ಹಾಸ್ಟೆಲ್ನಲ್ಲಿ ಉಳಿದಿರಬೇಕು ಎಂಬ ಷರತ್ತು ವಿಧಿಸಲಾಗಿದೆ.
ರೈಲ್ವೇ ಟಿಕೆಟ್ಗಳ ಖರೀದಿ ಮತ್ತು ವಿಶ್ರಾಂತಿ ಕೊಠಡಿ ಮತ್ತು ಕ್ಲಾಕ್ ರೂಮ್ ಸೇವೆಯ ಶುಲ್ಕದ ಮೇಲಿನ ಜಿಎಸ್ಟಿಯನ್ನು ರದ್ದುಪಡಿಸಲಾಗಿದೆ. ಬ್ಯಾಟರಿ ಚಾಲಿತ ವಾಹನಗಳು ಮತ್ತು ಅಂತರ್ ರೈಲ್ವೆ ಸೇವೆಗಳು ಕೂಡ ಜಿಎಸ್ ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
ಇದೇ ವೇಳೆ ಹಾಲಿನ ಕ್ಯಾನ್ ಗಳ ಮೇಲೆ ಏಕರೂಪದ ಶೇ.12ರಷ್ಟು ಜಿಎಸ್ ಟಿ ವಿಧಿಸಲು ಶಿಫಾರಸು ಮಾಡಿದ್ದು, ದಂಡದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲು ಶಿಫಾರಸು ಮಾಡಿದೆ
ಪೂರ್ವ ಬಜೆಟ್ ಸಭೆಯಲ್ಲಿ, ಸೀತಾರಾಮನ್ ಬೆಳವಣಿಗೆಯನ್ನು ಹೆಚ್ಚಿಸಲು ಸಕಾಲಿಕ ತೆರಿಗೆ ಹಂಚಿಕೆ ಮತ್ತು GST ಪರಿಹಾರದ ಬಾಕಿಗಳ ಮೂಲಕ ರಾಜ್ಯಗಳಿಗೆ ಕೇಂದ್ರದ ಬೆಂಬಲವನ್ನು ಒತ್ತಿಹೇಳಿದರು.
ನಿರ್ದಿಷ್ಟ ಸುಧಾರಣೆಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ಕೇಂದ್ರವು 50 ವರ್ಷಗಳ ಬಡ್ಡಿ ರಹಿತ ಸಾಲವನ್ನು ನೀಡುವ ಯೋಜನೆಯ ಲಾಭವನ್ನು ಪಡೆದುಕೊಳ್ಳುವಂತೆ ಅವರು ರಾಜ್ಯಗಳನ್ನು ಕೇಳಿದರು.