ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಆಫ್ಘಾನಿಸ್ತಾನ ಅಚ್ಚರಿ ಗೆಲುವು ಸಾಧಿಸಿದ್ದರಿಂದ ಸೂಪರ್-8 ಹಂತದಲ್ಲಿ ಬಲಿಷ್ಠ ತಂಡಗಳ ಆತಂಕ ಹೆಚ್ಚಿಸಿದ್ದು, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಟೂರ್ನಿಯಿಂದ ಹೊರಬೀಳುವ ಭೀತಿಗೆ ಸಿಲುಕಿದೆ.
ಆಸ್ಟ್ರೇಲಿಯಾ ವಿರುದ್ಧದ ಆಫ್ಘಾನಿಸ್ತಾನದ ಗೆಲುವು ಗುಂಪು-1ರಲ್ಲಿ ತಂಡಗಳ ಸೆಮಿಫೈನಲ್ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ. ಅಲ್ಲದೇ ಸೆಮಿಫೈನಲ್ ಕನಸಿನಲ್ಲಿದ್ದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಸ್ಥಾನ ಅಲುಗಾಡುವಂತೆ ಮಾಡಿದ್ದು, ಎರಡೂ ತಂಡಗಳು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕುವಂತಾಗಿದೆ.
ರೋಹಿತ್ ಶರ್ಮ ನಾಯಕತ್ವದ ಭಾರತ ತಂಡ ಶುಕ್ರವಾರ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗೆದ್ದರೂ ಸೆಮಿಫೈನಲ್ ನಲ್ಲಿ ಸ್ಥಾನ ಭದ್ರಪಡಿಸಿಕೊಂಡಿಲ್ಲ. ಆಸ್ಟ್ರೇಲಿಯಾ ವಿರುದ್ಧದ ನಾಳಿನ ಪಂದ್ಯದಲ್ಲಿ ಗೆದ್ದರೆ ಸೆಮಿಫೈನಲ್ ನಲ್ಲಿ ತನ್ನ ಸ್ಥಾನ ಖಚಿತಪಡಿಸಿಕೊಳ್ಳಲಿದೆ.
ಒಂದು ವೇಳೆ ಸೋತರೆ ಆಸ್ಟ್ರೇಲಿಯಾ ಮತ್ತು ಆಫ್ಘಾನಿಸ್ತಾನ ತಂಡಗಳ ಪಂದ್ಯಗಳ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ. ಅಲ್ಲದೇ ರನ್ ಸರಾಸರಿಯ ಲೆಕ್ಕಾಚಾರ ನಡೆಯಲಿದೆ. ಆದರೆ ಭಾರತ ಹಿಂದಿನ ಪಂದ್ಯಗಳಲ್ಲಿ ಭಾರೀ ಅಂತರದಲ್ಲಿ ಗೆಲ್ಲದೇ ಇರುವುದರಿಂದ ಭಾರತ ಹೊರಬೀಳುವ ಸಾಧ್ಯತೆ ಇದೆಯೂ ಇದೆ.
ಆಸ್ಟ್ರೇಲಿಯಾ ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಳ್ಳಬೇಕಾದರೆ ಭಾರತ ವಿರುದ್ಧ ಕನಿಷ್ಠ 41 ರನ್ ಗಳ ಅಂತರದಿಂದ ಗೆಲ್ಲಬೇಕಿದೆ. ಮತ್ತೊಂದೆಡೆ ಆಫ್ಘಾನಿಸ್ತಾನ ಬಾಂಗ್ಲಾದೇಶ ವಿರುದ್ಧ 83 ರನ್ ಗಳಿಂದ ಜಯ ಗಳಿಸಬೇಕಾಗಿದೆ.
ಒಂದು ವೇಳೆ ಆಸ್ಟ್ರೇಲಿಯಾ ಮತ್ತು ಭಾರತ ನಡುವಣ ಪಂದ್ಯ ರದ್ದಾದರೆ ಭಾರತ 5 ಅಂಕ ಗಳಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಲಿದೆ.
ಜೂನ್ 24 ಸೋಮವಾರ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯ ಉಭಯ ತಂಡಗಳ ಪಾಲಿಗೆ ಅತ್ಯಂತ ಮಹತ್ವದ್ದಾಗಿದ್ದು, ಎರಡೂ ತಂಡಗಳು ಯಾವುದೇ ಲೆಕ್ಕಾಚಾರಗಳಿಗೆ ಅವಕಾಶ ನೀಡದೇ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯಲಿವೆ. ಭಾರತ ತಂಡ ಸಂಜು ಸ್ಯಾಮ್ಸನ್ ಅವರನ್ನು ಮಹತ್ವದ ಪಂದ್ಯದಲ್ಲಿ ಆಡಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.