ಶತಕ ವಂಚಿತೆ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಭರ್ಜರಿ ಪ್ರದರ್ಶನದಿಂದ ಭಾರತ ವನಿತೆಯರ ತಂಡ 6 ವಿಕೆಟ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು 3-0ಯಿಂದ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ವನಿತೆಯರು 8 ವಿಕೆಟ್ ಕಳೆದುಕೊಂಡು 215 ರನ್ ಕಲೆ ಹಾಕಿತು. ಸಾಧಾರಣ ಗುರಿ ಬೆಂಬತ್ತಿದ ಭಾರತದ ವನಿತೆಯರು 40.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸ್ಮೃತಿ ಮಂದಾನ 83 ಎಸೆತಗಳಲ್ಲಿ 11 ಬೌಂಡರಿ ಸಹಿತ 90 ರನ್ ಬಾರಿಸಿದ್ದಾಗ ಮ್ಲಾಬಾ ಎಸೆತದಲ್ಲಿ ಔಟಾಗಿ 10 ರನ್ ಗಳಿಂದ ಶತಕ ವಂಚಿತರಾದರು.
ಸ್ಮೃತಿ ಮಂದಾನ ಮೊದಲ ವಿಕೆಟ್ ಗೆ ಶೆಫಾಲಿ ವರ್ಮಾ (25) ಜೊತೆ 61 ರನ್ ಜೊತೆಯಾಟ ನಿಭಾಯಿಸಿದರೆ, ಎರಡನೇ ವಿಕೆಟ್ ಗೆ ಪ್ರಿಯಾ ಪುನಿಯಾ (28) ಜೊತೆ 62 ರನ್ ಪೇರಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಹರ್ಮನ್ ಪ್ರೀತ್ ಕೌರ್ 48 ಎಸೆತಗಳಲ್ಲಿ 2 ಬೌಂಡರಿ ಒಳಗೊಂಡ 42 ರನ್ ಗಳಿಸಿದರೆ, ಜೆಮಿಹಾ ರೋಡ್ರಿಗಜ್ ಅಜೇಯ 19 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಪರ ನಾಯಕಿ ಲೌರಾ ವೊಲ್ವಡರ್ಟ್ 61 ರನ್ ಬಾರಿಸಿದರೆ, ತಾಸ್ಮಿನ್ ಬರ್ಟ್ಸ್ 38 ರನ್ ಗಳಿಸಿದರು. ಇಬ್ಬರು ಮೊದಲ ವಿಕೆಟ್ ಗೆ 102 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ ನಂತರ ಬಂದ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ಪರದಾಡಿದ್ದರಿಂದ ಬೃಹತ್ ಮೊತ್ತ ಪೇರಿಸಲು ವಿಫಲರಾದರು.