ಬೆಂಗಳೂರು: ಹೆಚ್ಚು ಲಾಭಾಂಶದ ಆಮಿಷವೊಡ್ಡಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚನೆ ನಡೆಸಿರುವ ಶಿವಂ ಅಸೋಸಿಯೇಟ್ಸ್ ಹಾಗೂ ಶಿವಾನಂದ ಸಿದ್ಧಪ್ಪ ನೀಲಣ್ಣವರ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಭಾರಿ ಕಾರ್ಯಾಚರಣೆ ನಡೆಸಿದೆ.
ಮಂಗಳೂರಿನ ಇಡಿ ತನಿಖಾ ತಂಡವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ಬೆಳಗಾವಿ, ಚಿಕ್ಕೋಡಿ ಹಾಗೂ ನಿಪ್ಪಾಣಿಯ ಹಲವು ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಮಾಹಿತಿ ನೀಡಿದೆ.
ಬೆಳಗಾವಿ ಜಿಲ್ಲೆಯ ಮಾಳಮಾರುತಿ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಆಧಾರದ ಮೇಲೆ ಇಡಿ ಅಧಿಕಾರಿಗಳು ಪ್ರತ್ಯೇಕ ತನಿಖೆ ಆರಂಭಿಸಿದ್ದರು. ಶಿವಾನಂದ ಸಿದ್ಧಪ್ಪ ನೀಲಣ್ಣವರ ಹಾಗೂ ಅವರ ಸಹಚರರು ಸಾರ್ವಜನಿಕರಿಗೆ ತಿಂಗಳಿಗೆ ಶೇ.3ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ ಒಟ್ಟು 2,110.97 ಕೋಟಿ ಠೇವಣಿ ಸಂಗ್ರಹಿಸಿದ್ದರು. ಆದರೆ, ಸಂಗ್ರಹಿಸಿದ ಮೊತ್ತದಲ್ಲಿ ಹೂಡಿಕೆದಾರರಿಗೆ ಕೇವಲ 333.89 ಕೋಟಿ ರೂಪಾಯಿ ಮಾತ್ರವೇ ಹಿಂದುರಿಗಿಸಿದ್ದಾರೆ.
ಇನ್ನುಳಿದ 1,777.08 ಕೋಟಿ ಅಕ್ರಮ ಹಣದ ಸುಳಿವು ಪತ್ತೆಯಾಗಬೇಕಿದೆ. ಆರೋಪಿಗಳು ಸಾರ್ವಜನಿಕರನ್ನು ಸೆಳೆಯಲು ಮಧ್ಯವರ್ತಿಗಳಿಗೆ ಶೇ.0.5ರಷ್ಟು ಕಮಿಷನ್ ನೀಡುತ್ತಿದ್ದರು ಎಂಬ ಅಂಶವನ್ನೂ ಸಹ ಇಡಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಹೂಡಿಕೆದಾರರಿಂದ ಸಂಗ್ರಹಿಸಿದ ಸಾರ್ವಜನಿಕರ ಹಣವನ್ನು ಷೇರು ಮಾರುಕಟ್ಟೆ, ಬ್ಯಾಂಕ್ ನಿಶ್ಚಿತ ಠೇವಣಿಗಳು, ರಿಯಲ್ ಎಸ್ಟೇಟ್ ಹಾಗೂ ನಿಕಟವರ್ತಿಗಳ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಲಾಗಿತ್ತು.
ಈ ಜಾಲದಲ್ಲಿ ಶಿವಂ ಅಸೋಸಿಯೇಟ್ಸ್, ಶಿವಾನಂದ ಸಿದ್ಧಪ್ಪ ನೀಲಣ್ಣವರ, ಸುಭಾಷ್ ರಾಮಗೌಡ ನಂದರಗಿ, ಮಹೇಶ್ ಎಸ್.ನೀಲಣ್ಣವರ, ಶಿವಂ ಪ್ರೊಡಕ್ಷನ್ಸ್, ಶಿವಂ ಲೈಫ್‌ಲೈನ್ ಪ್ರೈವೇಟ್ ಲಿಮಿಟೆಡ್ ಮತ್ತು ಶಿವಂ ಸೇವಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳು ಹಾಗೂ ವ್ಯಕ್ತಿಗಳು ನೇರವಾಗಿ ಭಾಗಿಯಾಗಿರುವುದು ಕಂಡುಬಂದಿದೆ.
ದಾಳಿಯ ಸಂದರ್ಭದಲ್ಲಿ ಅಕ್ರಮ ಹಣಕಾಸು ವಹಿವಾಟು, ಬೇನಾಮಿ ಆಸ್ತಿ ಹೂಡಿಕೆ ಹಾಗೂ ಡಿಜಿಟಲ್ ಸಾಕ್ಷ್ಯಗಳೂ ಸೇರಿದಂತೆ ಹಲವಾರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.



