ಮೈಸೂರು: ಮೂರು ದಶಕಗಳಿಗೂ ಹೆಚ್ಚು ಕಾಲ ಅರಣ್ಯ ಇಲಾಖೆ ಹಾಗೂ ದಸರಾ ಉತ್ಸವದಲ್ಲಿ ಸೇವೆ ಸಲ್ಲಿಸಿರುವ 54 ವರ್ಷ ವಯಸ್ಸಿನ ಪ್ರಶಾಂತ ಆನೆ ಈ ಬಾರಿಯ ಜಂಬೂ ಸವಾರಿಯಲ್ಲಿ ಶ್ರೀ ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನು ಹೊತ್ತು ಸಾಗುವ ಅಂಬಾರಿ ಹೊರುವ ಮಹತ್ವದ ಜವಾಬ್ದಾರಿ ಸ್ಥಾನಕ್ಕೆ ಆಯ್ಕೆಯಾಗಿದೆ.
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಯಲ್ಲಿ ಅಂಬಾರಿ ಹೊರುವ ಆನೆಯಾಗಿ ಪ್ರಶಾಂತ ಆಯ್ಕೆಯಾಗಿರುವುದು ಗಮನ ಸೆಳೆದಿದೆ. ಬಲಿಷ್ಠ ದೇಹ, ಗಂಭೀರ ನಡವಳಿಕೆ, ಶಿಸ್ತು ಹಾಗೂ ಆಜ್ಞಾಪಾಲನೆಗೆ ಹೆಸರಾಗಿರುವ ಪ್ರಶಾಂತ, ದಸರಾ ಆನೆಗಳ ಪೈಕಿ ಪ್ರಮುಖ ಸ್ಥಾನ ಪಡೆದಿದೆ.
ಶಿವಮೊಗ್ಗ ಜಿಲ್ಲೆಯ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ 1993ರಲ್ಲಿ ಅರಣ್ಯ ಇಲಾಖೆಯು ಪ್ರಶಾಂತ ಆನೆಯನ್ನು ಯಶಸ್ವಿಯಾಗಿ ಸೆರೆಹಿಡಿದಿತ್ತು. ಬಳಿಕ ಆನೆಗೆ ವಿಶೇಷ ತರಬೇತಿ ನೀಡಿ, ಅರಣ್ಯ ಇಲಾಖೆಯ ವಿವಿಧ ಕಾರ್ಯಾಚರಣೆಗಳಲ್ಲಿ ಬಳಸಿಕೊಳ್ಳಲಾಯಿತು. ತನ್ನ ಶಕ್ತಿ, ತಾಳ್ಮೆ ಹಾಗೂ ನಂಬಿಕಸ್ಥ ಸ್ವಭಾವದಿಂದ ಇಲಾಖೆಯ ಕಾರ್ಯಾಚರಣೆಗಳಲ್ಲಿ ಪ್ರಶಾಂತ ಮೌಲ್ಯಯುತ ಸೇವೆ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಆನೆಗಳ ದೈಹಿಕ ಆರೋಗ್ಯ, ಭಾರ ಹೊರುವ ಸಾಮರ್ಥ್ಯ, ಬೆನ್ನಿನ ರಚನೆ, ನಡಿಗೆಯ ಸ್ಥಿರತೆ, ಸಹನಶಕ್ತಿ, ಸ್ವಭಾವ, ಹಿಂದಿನ ಅನುಭವ ಹಾಗೂ ತರಬೇತಿಯಲ್ಲಿನ ಕಾರ್ಯಕ್ಷಮತೆಯನ್ನು ಸಮಗ್ರವಾಗಿ ಪರಿಶೀಲಿಸಿ ಪ್ರಶಾಂತ್ ಆನೆಯನ್ನು ಆಯ್ಕೆ ಮಾಡಲಾಗಿದೆ.
ಹದಿನೆಂಟು ವರ್ಷಗಳ ಅನುಭವ: ಪ್ರಶಾಂತ್ ಆನೆಯು ಕಳೆದ 18 ವರ್ಷಗಳಿಂದ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. 2.61 ಮೀಟರ್ ಎತ್ತರವಿದ್ದು, 3.46 ಮೀಟರ್ ಉದ್ದವಿದೆ. 5100 ಕೆ.ಜಿ ತೂಕವಿದೆ. ಈ ಆನೆಯ ಗಂಭೀರ ಹಾಗೂ ಶಾಂತಿಯುತ ಸ್ವಭಾವವು ಮೆರವಣಿಗೆಯ ಭದ್ರತೆಗೆ ಅತ್ಯಂತ ಸಹಕಾರಿಯಾಗಿದೆ. ಅರಮನೆಯ ವಾತಾವರಣ, ಮೆರವಣಿಗೆಯ ಮಾರ್ಗ, ಜನಸಂದಣಿ, ವಾದ್ಯಘೋಷ ಹಾಗೂ ಮಾವುತರ ನಿರ್ದೇಶನಗಳಿಗೆ ಹೊಂದಿಕೊಂಡಿರುವ ಸುದೀರ್ಘ ಅನುಭವವು ಅದರ ಪ್ರಮುಖ ಸಾಮರ್ಥ್ಯವಾಗಿದೆ. ಅಂಬಾರಿ ಹೊರುವುದಕ್ಕೆ ಅನುಕೂಲಕರವಾದ ಬೆನ್ನಿನ ರಚನೆ: ಪ್ರಶಾಂತ್ ಆನೆಯ ಬೆನ್ನಿನ ಮೇಲ್ಬಾಗವು ತುಲನಾತ್ಮಕವಾಗಿ ಸಮತಟ್ಟಾಗಿದ್ದು ಅಂಬಾರಿಯನ್ನು ಸ್ಥಿರವಾಗಿ ಮತ್ತು ಸಮತೋಲನದಿಂದ ಇರಿಸಲು ಅನುಕೂಲಕರವಾಗಿದೆ. ಚಿನ್ನದ ಅಂಬಾರಿ ಹೊರುವ ಆನೆಯ ಆಯ್ಕೆಯಲ್ಲಿ ಇದು ಅತ್ಯಂತ ಪ್ರಮುಖವಾದ ದೈಹಿಕ ವೈಶಿಷ್ಟವಾಗಿದೆ.
ಪ್ರಶಾಂತ್ ಆನೆಯು ನಿಗದಿತ ಮೆರವಣಿಗೆ ಮಾರ್ಗದಲ್ಲಿ 11ಕಿ.ಮೀ. ದೂರದ ತರಬೇತಿಯಲ್ಲಿ ಭಾಗವಹಿಸಿದ್ದು, 700 ಕೆ.ಜಿ. ಹಾಗೂ 1,000 ಕೆ.ಜಿ. ಭಾರವನ್ನು ಒಳಗೊಂಡ ಅಭ್ಯಾಸಗಳನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿದೆ. ಮರದ ಅಂಬಾರಿ ಮತ್ತು ಮರಳು ಮೂಟೆಗಳೊಂದಿಗೆ ನಡೆಸಲಾದ ತರಬೇತಿಯಲ್ಲಿಯೂ ಉತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ. ಪ್ರಶಾಂತ್ ಆನೆಯ ಶಾಂತ ಸ್ವಭಾವ, ಮಾವುತರ ನಿರ್ದೇಶನಗಳಿಗೆ ಸ್ಪಂದಿಸುವ ಗುಣ ಹಾಗೂ ಮೆರವಣಿಗೆಯ ವಾತಾವರಣಕ್ಕೆ ಹೊಂದಿಕೊಳ್ಳುವ ಅನುಭವವು ಅದರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜನಸಂದಣಿ ಮತ್ತು ವಾದ್ಯಘೋಷಗಳ ನಡುವೆ ಶಿಸ್ತುಬದ್ಧವಾಗಿ ಸಾಗಬೇಕಾದ ಅಂಬಾರಿ ಆನೆಗೆ ಈ ಗುಣಗಳು ಅತ್ಯಂತ ಅಗತ್ಯವಾಗಿವೆ.
54 ವರ್ಷ ವಯಸ್ಸಿನ ಪ್ರಶಾಂತ್ ಆನೆಯ ಸುದೀರ್ಘ ಅನುಭವ, ದೈಹಿಕ ರಚನೆ, ತರಬೇತಿಯಲ್ಲಿ ಪ್ರದರ್ಶಿಸಿರುವ ಸಾಮರ್ಥ್ಯ ಹಾಗೂ ಸಮತೋಲನಯುತ ನಡಿಗೆಯನ್ನು ಪರಿಗಣಿಸಿದಾಗ, ಅದು ಪ್ರಧಾನ ಅಂಬಾರಿ ಆನೆಯ ಜವಾಬ್ದಾರಿಗೆ ಸೂಕ್ತವಾಗಿದೆ ಎಂದು ಸಮಿತಿ ಅಭಿಪ್ರಾಯ ಪಟ್ಟಿದೆ. ಪ್ರಸ್ತುತ ದಸರಾ ಮಹೋತ್ಸವಕ್ಕೆ ಆಗಮಿಸಿರುವ ಆನೆಗಳಿಗೆ ಮೈಸೂರು ಅರಮನೆ ಆವರಣ ಹಾಗೂ ನಿಗದಿತ ಮೆರವಣಿಗೆ ಮಾರ್ಗದಲ್ಲಿ ನಿಯಮಿತ ತರಬೇತಿ ನೀಡಲಾಗುತ್ತಿದೆ.
ಪ್ರಶಾಂತ್, ಸುಗ್ರೀವ, ಧನಂಜಯ ಮತ್ತು ಏಕಲವ್ಯ ಸೇರಿದಂತೆ ವಿವಿಧ ಆನೆಗಳ ಮರಳು ಮೂಟೆ ಹಾಗೂ ಮರದ ಅಂಬಾರಿ ಹೊರುವ ತರಬೇತಿಯನ್ನು ಪರಿಶೀಲಿಸಲಾಗಿದೆ. ಆನೆಗಳ ನಡಿಗೆ, ಸಮತೋಲನ, ಭಾರ ಹೊರುವ ಸಾಮರ್ಥ್ಯ, ಸಹನಶಕ್ತಿ ಹಾಗೂ ವರ್ತನೆಯನ್ನು ಪಶುವೈದ್ಯಾಧಿಕಾರಿಗಳು, ಅರಣ್ಯಾಧಿಕಾರಿಗಳು ಮತ್ತು ಅನುಭವಿ ಮಾವುತರ ಸಹಕಾರದೊಂದಿಗೆ ಮೌಲ್ಯ ಮಾಪನ ಮಾಡಲಾಗಿದೆ. ಇದಲ್ಲದೆ, ಜಂಬೂಸವಾರಿಯ ಸಂದರ್ಭದಲ್ಲಿ ಉಂಟಾಗುವ ಸಿಡಿಮದ್ದಿನ ಶಬ್ದಕ್ಕೆ ಆನೆಗಳು ಹೊಂದಿಕೊಳ್ಳುವಂತೆ ವಿಶೇಷ ತಾಲೀಮುಗಳನ್ನು ನೀಡಲಾಗುತ್ತಿದೆ.
ಈ ಎಲ್ಲ ಅಂಶಗಳ ತುಲನಾತ್ಮಕ ಪರಿಶೀಲನೆಯ ನಂತರ ಪ್ರಶಾಂತ್ ಆನೆಯ ಸುದೀರ್ಘ ಅನುಭವ, ಅಂಬಾರಿ ಸ್ಥಾಪನೆಗೆ ಅನುಕೂಲಕರವಾದ ಬೆನ್ನಿನ ರಚನೆ, ತರಬೇತಿಯಲ್ಲಿ ಸಾಬೀತಾಗಿರುವ ಸಾಮರ್ಥ್ಯ ಹಾಗೂ ಶಾಂತ ಸ್ವಭಾವವು ಅದರ ಆಯ್ಕೆಗೆ ಪ್ರಮುಖ ಆಧಾರಗಳಾಗಿವೆ. ಆನೆಯ ಮಾವುತ ಜೆ.ಎ.ಚಿನ್ನಪ್ಪ, ಕಾವಾಡಿ ಚಂದ್ರ ಪ್ರಶಾಂತನ ನಿರ್ವಹಣೆ ಮಾಡುತ್ತಿದ್ದಾರೆ.



