ಗೋಬಿ ಮಂಚೂರಿ, ಕ್ಯಾಂಡಿ ಕಾಟನ್ ಸೇರಿದಂತೆ ಹಲವು ಖಾದ್ಯಗಳಿಗೆ ಕೃತಕ ಬಣ್ಣ ಬಳಕೆ ನಿಷೇಧಿಸಿದ್ದ ರಾಜ್ಯ ಸರ್ಕಾರ ಇದೀಗ ಚಿಕನ್ ಕಬಾಬ್ ಮತ್ತು ಮೀನು ಖಾದ್ಯಗಳಿಗೆ ಕೃತಕ ಬಣ್ಣ ಬಳಕೆಯನ್ನು ನಿಷೇಧಿಸಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರಾಜ್ಯದ ಜನರ ಆರೋಗ್ಯದ ದೃಷ್ಟಿಯಿಂದ ಮಾಂಸಹಾರಿ ಆಹಾರಗಳಿಗೆ ಕೃತಕ ಬಣ್ಣ ಬಳಕೆಗೆ ಕಡಿವಾಣ ಹಾಕಲಾಗಿದೆ ಎಂದು ತಿಳಿಸಿದ್ದಾರೆ.
ಹೋಟೆಲ್ ಹಾಗೂ ರಸ್ತೆ ಬದಿ ಅಂಗಡಿಗಳಲ್ಲಿ ಚಿಕನ್ ಮತ್ತು ಮೀನು ಆಹಾರಗಳನ್ನು ಆಕರ್ಷಿಸುವ ಸಲುವಾಗಿ ಕೃತಕ ಬಣ್ಣಗಳನ್ನು ಬಳಸುತ್ತಿರುವುದು ತಪಾಸಣೆ ವೇಳೆ ದೃಢಪಟ್ಟಿದೆ. ಈ ರೀತಿಯ ಕೃತಕ ಬಣ್ಣ ಬಳಕೆಯಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ದಿನೇಶ್ ಗುಂಡೂರಾವ್ ವಿವರಿಸಿದ್ದಾರೆ.
ರಾಜ್ಯ ಆಹಾರ ಮತ್ತು ಸುರಕ್ಷತೆ ಗುಣಮಟ್ಟ ಇಲಾಖೆಯು 39 ಕಬಾಬ್ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಇದರಲ್ಲಿ 8 ಕೃತಕ ಬಣ್ಣಗಳು ಕಂಡು ಬಂದಿವೆ. ಇದರಲ್ಲಿ ನಿರ್ದಿಷ್ಟವಾಗಿ ಸೂರ್ಯಾಸ್ತದ ಹಳದಿ ಮತ್ತು ಕಾರ್ಮೋಸಿನ್ ಅಂಶ ಬೆಳಕಿಗೆ ಬಂದಿದ್ದು, ಇವು ಆರೋಗ್ಯಕ್ಕೆ ಹಾನಿಕಾರ ಎಂಬುದು ದೃಢಪಟ್ಟಿದೆ.
ನಿಷೇಧ ಉಲ್ಲಂಘಿಸಿ ಕೃತಕ ಬಣ್ಣ ಬಳಸಿದ್ದು ಕಂಡು ಬಂದರೆ, ಕನಿಷ್ಠ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರೂಪಾಯಿ ದಂಡದ ಜೊತೆಗೆ ಆಹಾರ ಮಳಿಗೆಗಳ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ ಎಂದು ಸರ್ಕಾರ ಎಚ್ಚರಿಸಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006 ರ ಅಡಿಯಲ್ಲಿ ಮಾದರಿಗಳನ್ನು ಅಸುರಕ್ಷಿತವೆಂದು ವರದಿ ಮಾಡಲಾಗಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಆಹಾರ ಉತ್ಪನ್ನಗಳ ಗುಣಮಟ್ಟ ಮತ್ತು ಆಹಾರ ಸೇರ್ಪಡೆಗಳು) ನಿಯಮಗಳು, 2011 ರ ಪ್ರಕಾರ, ಯಾವುದೇ ಕೃತಕ ಬಣ್ಣಗಳ ಬಳಕೆಯನ್ನು ನಿಷೇಧಿಸಲಾಗಿದೆ.
ಗೋಬಿ ಮಂಚೂರಿಯನ್ ಮತ್ತು ಕ್ಯಾಂಡಿ ಕಾಟನ್‌ನಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ನಿಷೇಧಿಸಿ ರಾಜ್ಯ ಸರ್ಕಾರವು ನಿರ್ದೇಶಿಸಿದ ತಿಂಗಳ ನಂತರ ಈ ನಿರ್ಧಾರವು ಬಂದಿದೆ.