ಲೋಸಕಭಾ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ತುರ್ತು ಪರಿಸ್ಥಿತಿ ಕುರಿತ ಓಂಪ್ರಕಾಶ್ ಬಿರ್ಲಾ ಅವರ ಹೇಳಿಕೆ ಪ್ರತಿಪಕ್ಷಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಲೋಕಸಭಾ ಸ್ಪೀಕರ್ ಆಗಿ ಆಯ್ಕೆ ನಂತರ ಮಾತನಾಡಿದ ಓಂಪ್ರಕಾಶ್ ಬಿರ್ಲಾ, ತುರ್ತು ಪರಿಸ್ಥಿತಿಯ ಕರಾಳ ದಿನದ ಅಂಗವಾಗಿ 2 ನಿಮಿಷಗಳ ಮೌನಾಚರಣೆ ಮಾಡುವ ಪ್ರಸ್ತಾಪ ಮುಂದಿಟ್ಟರು. ಇದರಿಂದ ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷಗಳ ಸದಸ್ಯರು ಸ್ಪೀಕರ್ ನಿರ್ಣಯದ ವಿರುದ್ಧ ಘೋಷಣೆ ಕೂಗಿದರು. ಇದರಿಂದ ಸದನದಲ್ಲಿ ಗದ್ಧಲ ನಿರ್ಮಾಣವಾಗಿದ್ದರಿಂದ ಕಲಾಪವನ್ನು ಮುಂದೂಡಲಾಯಿತು.
ಕೆಲವೇ ನಿಮಿಷಗಳ ಮುನ್ನ ದಶಕಗಳ ನಂತರ ಇದೇ ಮೊದಲ ಬಾರಿ ನಡೆದ ಲೋಕಸಭಾ ಸ್ಪೀಕರ್ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾದ ಓಂಪ್ರಕಾಶ್ ಬಿರ್ಲಾ 297 ಮತಗಳನ್ನು ಪಡೆದು ಗೆಲುವು ಸಾಧಸಿಸಿದರೆ, ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಕೆ. ಸುರೇಶ್ 232 ಮತಗಳನ್ನು ಪಡೆದು ಸೋಲುಂಡರು.
ಓಂಪ್ರಕಾಶ್ ಬಿರ್ಲಾ ಸ್ಪೀಕರ್ ಆಗಿ ಆಯ್ಕೆಯಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು. ನೀವು ನಗುತ್ತಾ ಇದ್ದರೂ ಕಲಾಪ ಸಂತೋಷ ಹಾಗೂ ಸುಲಲಿತವಾಗಿ ನಡೆಯಲಿದೆ ಎಂದು ಹಾರೈಸಿದರು. ನಂತರ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕೈಕುಲುಕಿ ಅಭಿನಂದಿಸಿದರು.
ನಂತರ ಮಾತನಾಡಿದ ಕಾಂಗ್ರೆಸ್ ಸಂಸದ ಶಶಿ ತರೂರ್, ಸ್ಪೀಕರ್ ಓಂಪ್ರಕಾಶ್ ಬಿರ್ಲಾ ಅನಗತ್ಯವಾಗಿ ವಿವಾದ ಸೃಷ್ಟಿಸಿ ಕಲಾಪವನ್ನು ಹಾಳು ಮಾಡಿ ಪ್ರತಿಪಕ್ಷಗಳ ಮೇಲೆ ಹೇರಲು ಪ್ರಯತ್ನಿಸುತ್ತಿದ್ದಾರೆ. 49 ವರ್ಷಗಳ ಹಿಂದೆ ನಡೆದ ಘಟನೆಯನ್ನು ಈಗ ಪ್ರಸ್ತಾಪಿಸಿ ಮೌನಾಚರಣೆ ಮಾಡುವ ಅವಶ್ಯಕತೆ ಏನಿದೆ? ಇದುವರೆಗೂ ನಡೆಯದೇ ಇರುವ ಹೊಸ ಸಂಪ್ರದಾಯಕ್ಕೆ ಯಾಕೆ ನಾಂದಿ ಹಾಡಿದ್ದಾರೆ. ಇದು ಅವರ ಮನಸ್ಥಿತಿಯನ್ನು ಸ್ಪಷ್ಟವಾಗಿ ತೋರಿಸತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ಸದನದಲ್ಲಿ ಮಾತನಾಡಿದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಸ್ಪೀಕರ್ ಪ್ರತಿಪಕ್ಷಗಳ ಧ್ವನಿಯಾಗಬೇಕು. ಇದುವರೆಗೆ ಕಲಾಪವನ್ನು ಸುಗಮವಾಗಿ ನಡೆಸುವುದಕ್ಕೆ ಮಾತ್ರ ನೀವು ಗಮನ ಹರಿಸಿದ್ದೀರಿ. ಆದರೆ ದೇಶದ ಜನರ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.