ಸಿಎಂ-ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಸ್ವಾಮೀಜಿಗಳು ಇದೀಗ ರಾಜಕೀಯ ಹೇಳಿಕೆ ನೀಡುವ ಮೂಲಕ ತಮ್ಮ ಕೋಮಿನ ಅಭ್ಯರ್ಥಿಗಳ ಪರ ಬ್ಯಾಟಿಂಗ್ ಮಾಡಲು ಆರಂಭಿಸದ್ದಾರೆ.
ಇತ್ತೀಚೆಗೆ ಸ್ವಾಮೀಜಿಯೊಬ್ಬರು ಡಿಸಿಎಂ ಸ್ಥಾನಕ್ಕೆ ತಮ್ಮ ಕೋಮಿನ ಅಭ್ಯರ್ಥಿ ಪರ ಬ್ಯಾಟಿಂಗ್ ಮಾಡಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಒಕ್ಕಲಿಗ ಸ್ವಾಮೀಜಿ ಸಿದ್ದರಾಮಯ್ಯ ಸಮ್ಮುಖದಲ್ಲೇ ನೀವು ಮನಸ್ಸು ಮಾಡಿದರೆ ಸಿಎಂ ಸ್ಥಾನವನ್ನು ಡಿಕೆ ಶಿವಕುಮಾರ್ ಅವರಿಗೆ ಬಿಟ್ಟುಕೊಡಬಹುದು ಎಂದು ಹೇಳಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಗುರುವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕೇಂಪೇಗೌಡ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲೇ ಒಕ್ಕಲಿಗ ಮಹಾ ಸಂಸ್ಥಾನದ ಚಂದ್ರಶೇಖರ್ ಸ್ವಾಮಿಜಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರೇ ನೀವು ದಯವಿಟ್ಟು ನಿಮ್ಮ ಸಿಎಂ ಕುರ್ಚಿಯನ್ನು ಡಿ.ಕೆ.ಶಿವಕುಮಾರ್ ಗೆ ಬಿಟ್ಟುಕೊಡಿ, ನೀವು ಮನಸ್ಸು ಮಾಡಿದರೆ ಅದು ಸಾಧ್ಯ ಎಂದಿದ್ದಾರೆ.
ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಉಪಸ್ಥಿತಿ ಇದ್ದಾಗಲೇ ಈ ಮಾತು ಹೇಳಿರುವುದು ಭಾರಿ ಸಂಚಲನ ಮೂಡಿಸಿದೆ. ಈ ಮಾತು ಕೇಳಿ ಸಿಎಂ ವೇದಿಕೆಯಲ್ಲಿ ಯಾವುದೇ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಜಾರಿದರು.
ಸಮಾರಂಭದ ನಂತರ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಸ್ವಾಮೀಜಿಗಳ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ಇದೆ. ಹೈಕಮಾಂಡ್ ಏನು ಹೇಳುತ್ತದೋ ಹಾಗೆ ನಡೆದುಕೊಳ್ಳುವೆ ಎಂದು ಮಾರ್ಮಿಕವಾಗಿ ಸ್ವಾಮೀಜಿಗೆ ತಿರುಗೇಟು ನೀಡಿದರು.