ಶಾಲೆಯ ಪಠ್ಯ ಪುಸ್ತಕದಲ್ಲಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಬಗ್ಗೆ ಅಧ್ಯಾಯ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಪೋಷಕರು ಬೆಂಗಳೂರಿನ ಹೆಬ್ಬಾಳದಲ್ಲಿರುವ ಸಿಂಧಿ ಶಾಲೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರಿನಲ್ಲಿ ಹಲವು ಕಡೆ ಶಾಖೆಗಳನ್ನು ಹೊಂದಿರುವ ಸಿಂಧಿ ಪ್ರೌಢಶಾಲೆ ತಮ್ಮ ಜನಾಂಗದ ಗಣ್ಯರ ಪಾಠಗಳನ್ನು ಸೇರಿಸುತ್ತಾ ಬಂದಿದೆ. ಆದರೆ ಇದೀಗ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಬಗ್ಗೆ ಪಾಠವನ್ನು ಪಠ್ಯಪುಸ್ತಕದಲ್ಲಿ ಸೇರಿಸಿರುವುದಕ್ಕೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶಾಲೆಯ ಆಡಳಿತ ಮಂಡಳಿ ಗಮನಕ್ಕೆ ಈ ವಿಷಯ ತಂದರೂ ಯಾವುದೇ ಪ್ರತಿಕ್ರಿಯೆ ದೊರೆಯದ ಕಾರಣ ಪೋಷಕರು ರಾಜ್ಯ ಮಕ್ಕಳ ಶಿಕ್ಷಣ ಹಕ್ಕು ಹಾಗೂ ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದು ತಮನ್ನಾ ಭಾಟಿಯಾ ಪಠ್ಯದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಮನ್ನಾ ಭಾಟಿಯಾ ಅಲ್ಲದೇ ಸಿಂಧಿ ಜನಾಂಗದ ನಾಯಕರಾದ ರಣವೀರ್ ಸಿಂಗ್ ಮುಂತಾದವರ ಪಾಠಗಳನ್ನು ಕೂಡ ಸೇರಿಸಲಾಗಿದೆ. ಪೋಷಕರು ರಣವೀರ್ ಸಿಂಗ್ ಪಾಠದ ಬಗ್ಗೆ ಯಾವುದೇ ತಕಾರರು ವ್ಯಕ್ತಪಡಿಸದೇ ತಮನ್ನಾ ಭಾಟಿಯಾ ಪಾಠದ ಬಗ್ಗೆ ಮಾತ್ರ ಯಾಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಶಾಲೆಯ ಆಡಳಿತ ಮಂಡಳಿ ಪ್ರಶ್ನಿಸಿದೆ.
ಮಕ್ಕಳಿಗೆ ಬೇರೆ ಸಮುದಾಯದ ಸಂಸ್ಕೃತಿ ಪರಿಚಯ ಮಾಡಿಕೊಡುವುದಕ್ಕೆ ಆಕ್ಷೇಪವಿಲ್ಲ. ಆದರೆ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಸಿನಿಮಾ ರಂಗದ ನಟ-ನಟಿಯರ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಹಳೆಯ ಕಾಲದ ನಟ-ನಟಿಯರ ಬಗ್ಗೆ ಪಾಠ ಮಾಡಿದರೂ ನಮ್ಮ ಅಭ್ಯಂತರ ಇಲ್ಲ. ಈಗಿನ ಕಾಲದ ನಟ-ನಟಿಯರನ್ನು ಪರಿಚಯಿಸುವ ಅವಶ್ಯಕತೆ ಇಲ್ಲ. ಏಕೆಂದರೆ ಇಂಟರ್ ನೆಟ್ ನಲ್ಲಿ ಹುಡುಕಿದರೆ ಎಲ್ಲಾ ಮಾಹಿತಿಯೂ ಮಕ್ಕಳಿಗೆ ಸಿಗುತ್ತದೆ ಎಂದು ಮತ್ತೊಬ್ಬ ಪೋಷಕರು ವಿವರಿಸಿದ್ದಾರೆ.
ಶಾಲೆಯು ಸಿಂಧಿಗಳ ಬಗ್ಗೆ 7ನೇ ತರಗತಿಯ ಪಠ್ಯಪುಸ್ತಕವನ್ನು ಹೊಂದಿದೆ. ಅದರಲ್ಲಿ ಒಂದು ಅಧ್ಯಾಯವು “ವಿಭಜನೆಯ ನಂತರದ ಜೀವನ: ಸಿಂಧ್‌ನಲ್ಲಿ ವಲಸೆ, ಸಮುದಾಯ ಮತ್ತು ಕಲಹ, 1947 ರಿಂದ 1962ರವರೆಗೆ”. ಒಂದು ನಿಬಂಧನೆಯು ಅವರಿಗೆ ತಮ್ಮ ಸಮುದಾಯ ಮತ್ತು ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಅವಕಾಶ ಮಾಡಿಕೊಟ್ಟಿದೆ, ಏಕೆಂದರೆ ಅವರು ಭಾಷಾ ಅಲ್ಪಸಂಖ್ಯಾತರಾಗಿದ್ದಾರೆ.