ಯುಜಿಸಿ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸಿಬಿಐ ಬಿಹಾರದ ಇಬ್ಬರನ್ನು ಬಂಧಿಸಿದೆ. ಈ ಮೂಲಕ ಪ್ರಕರಣ ದಾಖಲಿಸಿಕೊಂಡ ನಂತರ ಸಿಬಿಐ ಅರೆಸ್ಟ್ ಮಾಡಿದ ಮೊದಲ ಪ್ರಕರಣ ಇದಾಗಿದೆ.
ಬಿಹಾರದ ಮನೀಷ್ ಕುಮಾರ್ ಮತ್ತು ಆಶುತೋಷ್ ಎಂಬ ಇಬ್ಬರನ್ನು ಸಿಬಿಐ ಬಂಧಿಸಿದ್ದು, ಮನೀಷ್ ಕುಮಾರ್ ಅಭ್ಯರ್ಥಿಗಳಿಗೆ ವಾಹನ ಸೌಲಭ್ಯ ಮಾಡಿಕೊಟ್ಟಿದ್ದೂ ಅಲ್ಲದೇ ಖಾಲಿ ಇರುವ ಶಾಲೆಯ ಕೊಠಡಿಯನ್ನು ಗುರುತಿಸಿ ನಕಲು ಮಾಡಲು ಅವಕಾಶ ಮಾಡಿಕೊಟ್ಟಿದ್ದ.
ಮನೀಷ್ ಕುಮಾರ್ ಸುಮಾರು 25 ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಿದ್ದು, ಪ್ರಶ್ನೆ ಮತ್ತು ಉತ್ತರ ನೆನಪು ಮಾಡಿಕೊಳ್ಳಲು ಸಮಯಾವಕಾಶ ನೀಡಿತ್ತು. ಅಶುತೋಷ್ ಅಭ್ಯರ್ಥಿಗಳಿಗೆ ಉಳಿದುಕೊಳ್ಳಲು ಲಾಡ್ಜ್ ವ್ಯವಸ್ಥೆ ಮಾಡಿದ್ದ ಎಂದು ತಿಳಿದು ಬಂದಿದೆ.
ಗುರುವಾರ ಬೆಳಿಗ್ಗೆ ಇಬ್ಬರನ್ನು ವಿಚಾರಣೆಗೆ ಕರೆಯಲಾಗಿದ್ದು, ವಿಚಾರಣೆ ನಂತರ ಇಬ್ಬರನ್ನೂ ಸಿಬಿಐ ಬಂಧಿಸಿದೆ. ಸಿಬಿಐ ಕಳೆದ ಶುಕ್ರವಾರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮೊದಲ ಬಾರಿ ಎಫ್ ಐಆರ್ ದಾಖಲಿಸಿಕೊಂಡಿತ್ತು.