ಸ್ವಿಜರ್ಲೆಂಡ್ ತಂಡ 2-0 ಗೋಲುಗಳಿಂದ ಹಾಲಿ ಚಾಂಪಿಯನ್ ಇಟಲಿ ತಂಡಕ್ಕೆ ಆಘಾತ ನೀಡಿ ಯುರೋ ಕಪ್ 2024 ಫುಟ್ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಬರ್ಲಿನ್ ನಲ್ಲಿ ಶನಿವಾರ ನಡೆದ ಪ್ರೀಕ್ವಾರ್ಟರ್ ಫೈನಲ್ ನಲ್ಲಿ ಅಂಡರ್ ಡಾಗ್ ಎನಿಸಿಕೊಂಡಿದ್ದ ಸ್ವಿಜರ್ಲೆಂಡ್ ಅದ್ಭುತ ಪ್ರದರ್ಶನ ನೀಡುವ ಮೂಲಕ ಇಟಲಿಗೆ ಸೋಲುಣಿಸಿದೆ. ಈ ಮೂಲಕ ಇಟಲಿ ವಿರುದ್ಧ 31 ವರ್ಷಗಳಲ್ಲಿ ಮೊದಲ ಬಾರಿ ಗೆದ್ದ ದಾಖಲೆಯನ್ನು ಸ್ವಿಜರ್ಲೆಂಡ್ ತಂಡ ಬರೆಯಿತು.
ಸ್ವಿಜರ್ಲೆಂಡ್ ಪರ ರೆಮೊ ಫ್ರುಯೆಲರ್ (37ನೇ ನಿಮಿಷ) ಮತ್ತು ರುಬೆನ್ ವರ್ಗಿಸ್ (45ನೇ ನಿಮಿಷ) ತಲಾ ಒಂದು ಗೋಲು ಬಾರಿಸಿ ಸುಲಭ ಗೆಲುವಿಗೆ ಕಾರಣವಾದರೆ, ಇಟಲಿ ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿ ಟೂರ್ನಿಯಿಂದ ಹೊರಬಿದ್ದಿತು.
ಸ್ವಿಜರ್ಲೆಂಡ್ ಎಲ್ಲಾ ವಿಭಾಗಗಳಲ್ಲೂ ಅದ್ಭುತ ಪ್ರದರ್ಶನ ನೀಡಿ ಪಂದ್ಯದ ಮೇಲೆ ಹಿಡಿತ ಸಾಧಿಸುವ ಮೂಲಕ ಪ್ರಭುತ್ವ ಸಾಧಿಸಿದರೆ, ಇಟಲಿ ತಂಡ 95 ನಿಮಿಷಗಳ ಹೋರಾಟದಲ್ಲಿ ಕೇವಲ 1 ಬಾರಿ ಮಾತ್ರ ಎದುರಾಳಿ ಗೋಲು ಬಳಿ ಚೆಂಡು ತಲುಪಿದಷ್ಟೇ ಸಾಧನೆ ಮಾಡಿತು.
ಇಟಲಿ ತಂಡದ ಕಳಪೆ ಪ್ರದರ್ಶನಕ್ಕೆ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.