ಕಳ್ಳತನ ಮಾಡಿದ್ದಾನೆ ಎಂಬ ಶಂಕೆಯ ಮೇಲೆ ಗುಂಪು ಸಾಮೂಹಿಕ ಹಲ್ಲೆ ಮಾಡಿದ್ದರಿಂದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ ನಡೆದ 12 ಪ್ರಕರಣ ಇದಾಗಿದೆ.
ಉತ್ತರ ದಿನಾಜ್ಪುರದಲ್ಲಿ ಕೆಲವು ದಿನಗಳ ಹಿಂದೆಯಷ್ಟೇ ನಡೆದ ಘಟನೆ ಬೆನ್ನಲ್ಲೇ ಈ ಘಟನೆ ಮರುಕಳಿಸಿರುವುದು ಆಘಾತ ಮೂಡಿಸಿದ್ದು, ಪಶ್ಚಿಮ ಬಂಗಾಳದಲ್ಲಿ ಕೆಲವು ದಿನಗಳಿಂದ ದಿಢೀರನೆ ಹಿಂಸಾಚಾರ ಹೆಚ್ಚಾಗಿರುದು ಅಚ್ಚರಿ ಮೂಡಿಸಿದೆ.
ಜೂನ್ 22ರಂದು ಜರ್ಗಾಮ್ ಜಿಲ್ಲೆಯಲ್ಲಿ ಸೌರವ್ ಮತ್ತು ಶಾ ಎಂಬ ಯುವಕರನ್ನು ಕಳ್ಳರು ಎಂಬ ಶಂಕೆ ಮೇಲೆ ಗುಂಪು ಹಲ್ಲೆ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೌರವ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರೆ, ಮತ್ತೊಬ್ಬ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾನೆ.
ತಾಯಿಯ ಸ್ಕೂಟಿ ಪಡೆದು ಬಂದಿದ್ದ ಯುವಕರು ನಿರ್ಮಾಣ ಹಂತದ ಕಟ್ಟಡವೊಂದರ ಬಳಿ ಸ್ಕೂಟಿ ನಿಲ್ಲಿಸಿದ್ದರು. ಕಾರು ಕದಿಯಲು ಬಂದಿದ್ದಾರೆ ಎಂದು ತಪ್ಪಾಗಿ ಅರ್ಥೈಸಿಕೊಂಡ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಯುವಕರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು.
ನಿನ್ನೆಯಷ್ಟೇ ಮಹಿಳೆಯೊಬ್ಬರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದರು. ಘಟನೆಯನ್ನು ಟಿಎಂಸಿ ನಾಯಕ ಸಮರ್ಥಿಸಿಕೊಂಡಿದ್ದ. ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಪಶ್ಚಿಮ ಬಂಗಾಳದಲ್ಲಿ ದಿಢೀರನೆ ಹಿಂಸಾಚಾರ ಪ್ರಕರಣಗಳು ಹೆಚ್ಚಾಗಿವೆ.