ಭಾರತ ವನಿತೆಯರ ತಂಡದ ಸರ್ವಾಂಗೀಣ ಪ್ರದರ್ಶನದ ನೆರವಿನಿಂದ ಏಕೈಕ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಗಳ ಭಾರೀ ಅಂತರದಿಂದ ದಕ್ಷಿಣ ಆಫ್ರಿಕಾ ವನಿತೆಯರು ಸೋಲುಂಡಿದ್ದಾರೆ.
ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ 420 ರನ್ ಹಿನ್ನಡೆಯೊಂದಿಗೆ ಫಾಲೋಆನ್ ಗೆ ಒಳಗಾದ ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್ ನಲ್ಲಿ 373 ರನ್ ಗೆ ಪತನಗೊಡಿತು.
ಈ ಮೂಲಕ 37 ರನ್ ಗಳ ಅಲ್ಪ ಗುರಿ ಪಡೆದ ಭಾರತ ತಂಡ ವಿಕೆಟ್ ನಷ್ಟವಿಲ್ಲದೇ ಗೆಲುವು ದಾಖಲಿಸಿತು. ಇದರೊಂದಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಕಳೆದ ಮೂರು ಟೆಸ್ಟ್ ಪಂದ್ಯಗಳಲ್ಲೂ ಭಾರತ ತಂಡ ಗೆದ್ದು ಹ್ಯಾಟ್ರಿಕ್ ಗೆಲುವಿನ ದಾಖಲೆ ಬರೆಯಿತು.
ಭಾರತ ತಂಡ ಮೊದಲ ಇನಿಂಗ್ಸ್ ನಲ್ಲಿ ಶೆಫಾಲಿ ದ್ವಿಶತಕದ ನೆರವಿನೊಂದಿಗೆ 7 ವಿಕೆಟ್ ಗೆ 603 ರನ್ ಗಳಿಗೆ ಡಿಕ್ಲೇರ್ ಘೋಷಿಸಿತ್ತು. ದಕ್ಷಿಣ ಆಫ್ರಿಕಾ ತಂಡ ಮೊದಲ ಇನಿಂಗ್ಸ್ ನಲ್ಲಿ 266 ರನ್ ಗೆ ಆಲೌಟಾದರೆ, ಎರಡನೇ ಇನಿಂಗ್ಸ್ ನಲ್ಲಿ ನಾಯಕಿ ಲೌರಾ ವೊಲ್ವರ್ಟ್ (122) ಮತ್ತು ಸುನೆ ಲುಸ್ (109) ಶತಕ ಮತ್ತು ನಾದಿನ್ ಡಿ ಕ್ಲಾರ್ಕ್ (61) ಅರ್ಧಶತಕದ ನೆರವಿನಿಂದ ಪೈಪೋಟಿ ನೀಡಿ ತಂಡವನ್ನು ಇನಿಂಗ್ಸ್ ಸೋಲಿನ ಭೀತಿಯಿಂದ ಪಾರು ಮಾಡಿದರು.