ನೂರಾರು ಜನರ ಸಾವಿಗೆ ಕಾರಣವಾದ ಸತ್ಸಂಗದ ರೂವಾರಿ ಸ್ವಯಂ ಘೋಷಿತ ಗುರು ಭೋಲೆ ಬಾಬಾ ಅಲಿಯಾಸ್ ನಾರಾಯಣ್ ಸಾಕರ್ ಹರಿ, ಆಧ್ಯಾತ್ಮಕ್ಕೆ ಬರುವ ಮುನ್ನ ಗುಪ್ತಚರ ಇಲಾಖೆಗೆ ಕೆಲಸ ಮಾಡುತ್ತಿದ್ದಾಗಿ ಹೇಳಿಕೊಂಡಿದ್ದಾನೆ.
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಸತ್ಸಂಗದ ವೇಳೆ ಕಾಲ್ತುಳಿದಲ್ಲಿ ಹಲವಾರು ಮಕ್ಕಳು ಸೇರಿದಂತೆ ನೂರಾರು ಮಂದಿ ಅಸುನೀಗಿದ್ದಾರೆ. ಭೋಲೆ ಬಾಬಾ ಆಧ್ಯಾತ್ಮ ಪ್ರವಚನ ಕೇಳಲು ಸಾವಿರಾರು ಸಂಖ್ಯೆಯಲ್ಲಿ ಸತ್ಸಂಗದಲ್ಲಿ ಸೇರಿದ್ದಾಗ ಈ ದುರ್ಘಟನೆ ಸಂಭವಿಸಿದೆ.
1990ರಲ್ಲಿ ಆಧ್ಯಾತ್ಮ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಭಕ್ತರನ್ನು ಆಧ್ಯಾತ್ಮದ ಕಡೆ ಕರೆದೊಯ್ಯಲು ಆರಂಭಿಸಿದಾಗ ನಾನಿನ್ನು ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೆ. ನಂತರ ನನ್ನ ಕೆಲಸಕ್ಕೆ ರಾಜೀನಾಮೆ ನೀಡಿದೆ ಎಂದು ನಾರಾಯಣ್ ಸಾಕರ್ ಹರಿ ಹೇಳಿಕೊಂಡಿದ್ದಾರೆ.
ಉತ್ತರ ಪ್ರದೇಶದ ಈಥ್ ಜಿಲ್ಲೆಯ ಬಹದ್ದೂರ್ ನಗರಿಯಲ್ಲಿ ಜನಿಸಿದ ನಾರಾಯಣ್ ಸಾಕರ್ ಹರಿ ವಿದ್ಯಾಭ್ಯಾಸವನ್ನು ಇಲ್ಲಿಯೇ ಪೂರ್ಣಗೊಳಿಸಿದರು. ಪದವಿ ಮುಗಿಯುತ್ತಿದ್ದಂತೆ ಗುಪ್ತಚರ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡೆ. ನಂತರ ಆಧ್ಯಾತ್ಮದತ್ತ ಸೆಳೆತ ಉಂಟಾಗಿ ಆಕಡೆ ವಾಲಿದೆ ಎಂದು ಅವರು ಪ್ರವಚನದ ವೇಳೆ ಹೇಳಿದ್ದರು.
ನಾರಾಯಣ್ ಸಾಕರ್ ಹರಿ ಕೇಸರಿ ಬಣ್ಣದ ವಸ್ತ್ರ ಧರಿಸದೇ ಬಿಳಿ ಬಣ್ಣದ ಕುರ್ತ-ಪೈಜಾಮಾ ಮತ್ತು ಸೂಟ್ ಮತ್ತು ಟೈ ಧರಿಸುತ್ತಿದ್ದರು. ದೇಣಿಗೆಯಿಂದ ಬರುವ ಹಣವನ್ನು ನಾನು ಇಟ್ಟುಕೊಳ್ಳದೇ ಭಕ್ತರಿಗೆ ಹಂಚುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ನನ್ನನ್ನು ಹರಿಯೇ ಕಳುಹಿಸಿದ್ದು, ಅವನ ಸಂದೇಶಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇನೆ ಎಂದು ನಾರಾಯಣ್ ಸಾಕರ್ ಹರಿ ಭಾಷಣ ಮಾಡುತ್ತಿದ್ದರು.
ಅತ್ಯಂತ ಕಡಿಮೆ ಜಾಗದಲ್ಲಿ ಒಂದು ಸಮುದಾಯದ ಹೆಚ್ಚು ಜನರು ಸೇರಿದ್ದರಿಂದ ಇಕ್ಕಟ್ಟಾಗಿತ್ತು. ಘಟನೆ ನಡೆದಾಗ ಹೊರಗೆ ಹೋಗಲು ನೂಕುನುಗ್ಗಲು ಉಂಟಾಗಿದ್ದರಿಂದ ಕಾಲ್ತುಳಿತ ಸಂಭವಿಸಿದ್ದು, ಯಾವ ಕಾರಣಕ್ಕೆ ಈ ಘಟನೆ ಸಂಭವಿಸಿತ್ತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.