ಮದುವೆ ಸಮಾರಂಭ, ಅಂತ್ಯ ಸಂಸ್ಕಾರ ಮತ್ತು ಆಸ್ಪತ್ರೆಗಳನ್ನೇ ಗುರಿಯಾಗಿಸಿ ಮಹಿಳಾ ಆತ್ಮಾಹುತಿ ಬಾಂಬರ್ ಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 32 ಮಂದಿ ಮೃತಪಟ್ಟ ಘಟನೆ ನೈಜಿರಿಯಾದಲ್ಲಿ ನಡೆದಿದೆ.
ಉತ್ತರ ನೈಜಿರಿಯಾದ ಗ್ವಾಜಾ ನಗರದ ಹಲವೆಡೆ ನಡೆದ ಆತ್ಮಾಹುತಿ ದಾಳಿಯಲ್ಲಿ 32ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ಉಪ ಪ್ರಧಾನಿ ಕಾಸಿಂ ಶೆಟ್ಟಿಮಾ ಮಂಗಳವಾರ ಈ ವಿಷಯ ತಿಳಿಸಿದ್ದು, ಜಿಹಾದಿ ಉಗ್ರರು ದೇಶದಲ್ಲಿ ಮಹಿಳಾ ಆತ್ಮಾಹುತಿ ಬಾಂಬರ್ ಗಳನ್ನು ಬಳಸಿಕೊಂಡು ಮದುವೆ ಮನೆ, ಆಸ್ಪತ್ರೆ, ಅಂತ್ಯ ಸಂಸ್ಕಾರದ ಕಾರ್ಯಕ್ರಮಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಗ್ವಾಜಾದಲ್ಲಿ ವಿವಿಧೆಡೆ ನಡೆದ ದಾಳಿಯಲ್ಲಿ 42ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 32 ಮಂದಿ ಅಸುನೀಗಿದ್ದಾರೆ. ಬೊಕೊ ಹರಾಮ್ ಜಿಹಾದಿಸ್ ಸಂಘಟನೆ ದಾಳಿಯ ಹೊಣೆ ಹೊತ್ತಿದೆ.
2009ರಲ್ಲಿ ಆರಂಭವಾದ ದಾಳಿಯಲ್ಲಿ ಇದುವರೆಗೆ 40 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದು, ಲಕ್ಷಾಂತರ ಜನರು ನಿರ್ಗತಿಕರಾಗಿದ್ದಾರೆ. 2014ರಲ್ಲಿ ನೈಜಿರಿಯಾ ಉಗ್ರರ ದಾಳಿ ಹತ್ತಿಕ್ಕಲು ಸೇನೆಯನ್ನು ಬಳಸಲು ಆರಂಭಿಸಿದ ನಂತರ ಉಗ್ರರ ಆತ್ಮಾಹುತಿ ದಾಳಿ ಪ್ರಮಾಣ ಹೆಚ್ಚಾಗಿದೆ.