ಮಳೆಗಾಲ ಮುಗಿಯುವವರೆಗೂ ಕಟ್ಟಡ ಕಾಮಗಾರಿ ನಡೆಸದಂತೆ ಮಂಗಳೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ.
ಮಂಗಳೂರಿನ ಬಲ್ಮಠ ರಸ್ತೆಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಮಣ್ಣು ಕುಸಿದು ಉತ್ತರ ಪ್ರದೇಶ ಮೂಲದ ಚಂದನ್ ಕುಮಾರ್ ಎಂಬಾತ ಮೃತಪಟ್ಟ ಘಟನೆ ಬೆನ್ನಲ್ಲೇ ಪಾಲಿಕೆ ಆಯುಕ್ತ ಸಿಎಲ್ ಆನಂದ್ ಈ ಆದೇಶ ಹೊರಡಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಮಳೆಗಾಲ ಮುಗಿಯುವವರೆಗೂ ಯಾವುದೇ ಕಾಮಗಾರಿ ನಡೆಸಬಾರದು. ಒಂದು ವೇಳೆ ಕಾಮಗಾರಿ ನಡೆಸಿದರೆ ವಿಪತ್ತು ನಿರ್ವಹಣೆ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕಟ್ಟಡ ಕಾಮಗಾರಿ ನಡೆಸಬಾರದು. ಆದರೆ ಈಗಾಗಲೇ ಆರಂಭವಾಗಿರುವ ಕಟ್ಟಡ ಕಾಮಗಾರಿಗಳಿಗೆ ಈ ಆದೇಶ ಅನ್ವಯ ಆಗುವುದಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಬಲ್ಮಠ ರಸ್ತೆಯಲ್ಲಿ ಕಾಮಗಾರಿ ವೇಳೆ ಮಣ್ಣು ಕುಸಿದು ಇಬ್ಬರು ಸಿಲುಕಿದ್ದರು. ಸುಮಾರು ಆರೂವರೆ ಗಂಟೆಗಳ ಕಾರ್ಯಾಚರಣೆಯಿಂದ ಇಬ್ಬರನ್ನು ರಕ್ಷಿಸಲಾಯಿತಾದರೂ ಚಂದನ್ ಕುಮಾರ್ ಮೃತಪಟ್ಟರೆ, ಮತ್ತೊಬ್ಬ ರಾಜ್ ಕುಮಾರ್ ಎಂಬಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.