ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಮೇಲ್ಮನೆಯಲ್ಲಿ ಮಾಡಿದ ಚೊಚ್ಚಲ ಭಾಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮಹಿಳೆಯರ ಆರೋಗ್ಯದ ಬಗ್ಗೆ ಸರ್ಕಾರ ಹೆಚ್ಚು ಕಾಳಜಿ ವಹಿಸಲಿದೆ ಎಂದು ತಿಳಿಸಿದರು.
ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆ ವೇಳೆ ಬುಧವಾರ ಭಾಷಣ ಮಾಡಿದ ಸುಧಾಮೂರ್ತಿ, ಮಹಿಳೆಯರ ಆರೋಗ್ಯದ ಬಗ್ಗೆ ಭಾಷಣ ಮಾಡಿದರು. ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟರೆ ಒಂದು ಸಾವು ಎಂದಷ್ಟೇ ಪರಿಗಣಿಸಲಾಗುತ್ತದೆ. ಆದರೆ ಕುಟುಂಬದ ಸದಸ್ಯರಿಗೆ ಒಂದು ತಾಯಿ ಎಂದೆಂದಿಗೂ ಸಿಗುವುದಿಲ್ಲ ಎಂದರು.
ನಂತರ ಮಾತನಾಡಿದ ಪ್ರಧಾನಿ ಮೋದಿ, ಮಹಿಳೆಯರ ಆರೋಗ್ಯದ ಬಗ್ಗೆ ಸವಿವರಾಗಿ ಮಾತನಾಡಿದ ಸುಧಾಮೂರ್ತಿ ಅವರಿಗೆ ಧನ್ಯವಾದಗಳು ಸರ್ಕಾರ ಮಹಿಳೆಯರ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಲಿದೆ ಎಂದರು.
ಕಳೆದ 10 ವರ್ಷಗಳಲ್ಲಿ ನಮ್ಮ ಸರ್ಕಾರ ಮಹಿಳೆಯರ ಆರೋಗ್ಯ ಮತ್ತು ಸ್ಯಾನಿಟರ್ ಬಗ್ಗೆ ಹೆಚ್ಚು ಕೆಲಸ ಮಾಡಿದೆ. ನಾವು ಹೊಸದಾಗಿ ಕಟ್ಟಿಸಿದ ಶೌಚಾಲಯಗಳ ಲಾಭವನ್ನು ದೇಶದ ಎಲ್ಲಾ ಮಹಿಳೆಯರು ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಹೆರಿಗೆ ವೇಳೆ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ತಲುಪಿಸಲಾಗುತ್ತಿದೆ. ಅಲ್ಲದೇ ಗರ್ಭಿಣಿಯರಿಗೆ ಲಸಿಕೆ ಕೂಡ ನೀಡಲಾಗುತ್ತಿದೆ ಎಂದು ಮೋದಿ ವಿವರಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಸುಧಾಮೂರ್ತಿ ಹೆಣ್ಣು ಮಕ್ಕಳಿಗೆ 14ರಿಂದ 18 ವರ್ಷದೊಳಗೆ ಲಸಿಕೆ ಲಭಿಸಿದರೆ, ಆಕೆ ಕ್ಯಾನ್ಸರ್ ನಂತಹ ಅಪಾಯಕಾರಿ ರೋಗದಿಂದ ಮುಕ್ತರಾಗುತ್ತಾರೆ. ಆದರೆ ನಮ್ಮ ದೇಶದಲ್ಲಿ ತಡವಾಗಿ ಸಿಗುತ್ತಿರುವುದರಿಂದ ಮಹಿಳೆಯರಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದರು.