ದೇಶದ ಪ್ರಮುಖ ನಗರಗಳಲ್ಲಿ ವಾಯುಮಾಲಿನ್ಯ ಪ್ರಮಾಣ ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, 10 ನಗರಗಳಲ್ಲಿ ಪ್ರತಿ ವರ್ಷ ಮಾಲಿನ್ಯದಿಂದ 33 ಸಾವಿರ ಜನರು ಸಾವಿಗೀಡಾಗುತ್ತಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಲ್ಯಾನ್ಸೆಂಟ್ ಪ್ಲಾನೆಟರಿ ಹೆಲ್ತ್ ಸಂಸ್ಥೆ ಬಿಡುಗಡೆ ಮಾಡಿದ ಸಮೀಕ್ಷೆ ವರದಿ ಪ್ರಕಾರ ವಿಶ್ವ ಸಂಸ್ಥೆ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಪ್ರತಿ ಕ್ಯೂಬಿಕ್ ಮೀಟರ್ ಗೆ 15 ಮೈಕ್ರೊಗ್ರಾಮ್ಸ್ ಮಾಲಿನ್ಯದ ಮಾರ್ಗಸೂಚಿಗಿಂತ ಭಾರತದಲ್ಲಿ ಹೆಚ್ಚಿದೆ.
2008ರಿಂದ 2019ರ ಅವಧಿಯಲ್ಲಿ ಭಾರತದಲ್ಲಿ ನಡೆಸಲಾದ ಸಮೀಕ್ಷೆಯಲ್ಲಿ 10 ನಗರಗಳಾದ ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತಾ, ಮುಂಬೈ, ಪುಣೆ, ಶಿಮ್ಲಾ ಮತ್ತು ವಾರಣಾಸಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿದ ಗಾಳಿಯ ಗುಣಮಟ್ಟಕ್ಕಿಂತ ಕಳಪೆಯಾಗಿದ್ದು, ಪ್ರತಿ ವರ್ಷ ವಾಯು ಮಾಲಿನ್ಯದ ಕಾರಣದಿಂದ 33 ಸಾವಿರ ಮಂದಿ ಸಾವಿಗೀಡಾಗುತ್ತಿದ್ದಾರೆ ಎಂದು ವಿವರಿಸಲಾಗಿದೆ.
ಮುಂಬೈ, ಬೆಂಗಳೂರು, ಕೋಲ್ಕತಾ ಮತ್ತು ಚೆನ್ನೈನಲ್ಲಿ ವಾಯುಮಾಲಿನ್ಯ ಪ್ರಮಾಣ ಇತರೆ ನಗರಗಳಿಗೆ ಹೋಲಿಸಿದರೆ ಕಡಿಮೆ ಇದ್ದರೂ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಇರುವುದು ಅಚ್ಚರಿಯ ವಿಷಯವಾಗಿದೆ.
ಬೆಂಗಳೂರಿನಲ್ಲಿ 2100, ಚೆನ್ನೈನಲ್ಲಿ 2900, ಕೋಲ್ಕತಾದಲ್ಲಿ 4700 ಮತ್ತು ಮುಂಬೈನಲ್ಲಿ ಅತೀ ಹೆಚ್ಚು 5000 ಪ್ರತಿ ವರ್ಷ ವಾಯು ಮಾಲಿನ್ಯದಿಂದ ಸಾವಿಗೀಡಾಗುತ್ತಿದ್ದಾರೆ.