ಬ್ರಿಟನ್ ನಲ್ಲಿ ಗುರುವಾರ ಸಾರ್ವತ್ರಿಕ ಚುನಾವಣೆಯಲ್ಲಿ ಕೋಟ್ಯಂತರ ಜನರು ಮತದಾನ ಮಾಡಿದ್ದು, 14 ವರ್ಷಗಳಿಂದ ಆಡಳಿತದ ಚುಕ್ಕಾಣಿ ಹಿಡಿದಿದ್ದ ಕನ್ಸರ್ವೆಟಿವ್ ಪಕ್ಷಕ್ಕೆ ಭಾರೀ ಹಿನ್ನಡೆ ಆಗಲಿದ್ದು, ಲೇಬರ್ ಪಾರ್ಟಿ ಜಯಭೇರಿ ಬಾರಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ಭಾರತೀಯ ಮೂಲದ ಪ್ರಧಾನಿ ರಿಷಿ ಸುನಕ್ ಕನ್ಸರ್ವೆಟಿವ್ ಪಕ್ಷವನ್ನು ಮುನ್ನಡೆಸಿದ್ದು, ಆರ್ಥಿಕ ಹಿಂಜರಿತರದಿಂದ ತತ್ತರಿಸಿರುವ ಬ್ರಿಟನ್ ಜನತೆ ಭಾರೀ ಆಕ್ರೋಶ ಹೊಂದಿದ್ದಾರೆ ಎಂದು ಹೇಳಲಾಗಿದೆ.
ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್ ಸೇರಿದಂತೆ 650 ಸಂಸದೀಯ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ರಾತ್ರಿ 10 ಗಂಟೆಯವರೆಗೂ ಮತದಾನಕ್ಕೆ ಅವಕಾಶ ನೀಡಲಾಗಿದೆ. ಸುಮಾರು 40,000 ಕೇಂದ್ರಗಳಲ್ಲಿ 46 ದಶಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಈ ಚುನಾವಣೆ ಮೂಲಕ ಇದೇ ಮೊದಲ ಬಾರಿಗೆ ಹೊಸ ಮತದಾರರ ಗುರುತಿನ ಚೀಟಿ ಪರಿಚಯಿಸಲಾಗಿದೆ.
ಲೇಬರ್ ಪಾರ್ಟಿಯ ಕೀರ್ ಸ್ಟಾರ್ಮರ್ ಪ್ರಧಾನ ಮಂತ್ರಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷ ಸೋಲಲಿದೆ ಎಂದು ಹೇಳಲಾಗುತ್ತಿದೆ.
ಕನ್ಸರ್ವೆಟಿವ್ ಪಕ್ಷ ಕಳೆದ 14 ವರ್ಷಗಳಿಂದ ಚುಕ್ಕಾಣಿ ಹಿಡಿದಿದ್ದು, ಸತತ 5ನೇ ಬಾರಿ ಗೆಲುವಿಗಾಗಿ ಹೋರಾಟ ನಡೆಸಿದೆ. ಆದರೆ ಪ್ರಧಾನಿ ಸ್ಥಾನ ಅಲಂಕರಿಸಿರುವ ಸುನಕ್ ತಮ್ಮದೇ ಯಾರ್ಕ್ ಶೈರ್ ಕ್ಷೇತ್ರವಾದ ರಿಚ್‌ಮಂಡ್ ಮತ್ತು ನಾರ್ಥಲ್ಟನ್ ಕ್ಷೇತ್ರವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಸುನಕ್ 2019ರಲ್ಲಿ 27,000 ಮತಗಳ ಬಹುಮತದೊಂದಿಗೆ ಗೆಲುವು ಕಂಡಿದ್ದರು.
2019ರ ಕೊನೆಯ ಸಾರ್ವತ್ರಿಕ ಚುನಾವಣೆಯಲ್ಲಿ ಬೋರಿಸ್ ಜಾನ್ಸನ್ ಅವರ ಕನ್ಸರ್ವೇಟಿವ್ಸ್ 365 ಸ್ಥಾನಗಳನ್ನು ಗೆದ್ದು 80 ಸ್ಥಾನಗಳ ಬಹುಮತವನ್ನು ಪಡೆದುಕೊಂಡಿತು. ಲೇಬರ್ 202 ಸ್ಥಾನಗಳನ್ನು, ಎಸ್ ಎನ್ ಪಿ 48, ಮತ್ತು ಲಿಬರಲ್ ಡೆಮೋಕ್ರಾಟ್ 11 ಸ್ಥಾನಗಳನ್ನು ಗೆದ್ದಿದೆ. ಈ ಬಾರಿ, 8 ವರ್ಷಗಳಲ್ಲಿ ಆಂತರಿಕ ಕಲಹ ಮತ್ತು ಐದು ವಿಭಿನ್ನ ಪ್ರಧಾನ ಮಂತ್ರಿಗಳಿಂದ ಗುರುತಿಸಲ್ಪಟ್ಟ ಅವಧಿಯ ನಂತರ ಟೋರಿಗಳು ಮತದಾರರ ಹಿನ್ನಡೆಯನ್ನು ಎದುರಿಸುತ್ತಿದ್ದಾರೆ.