ಟಿ-20 ವಿಶ್ವಕಪ್ ವಿಜೇತ ಭಾರತ ತಂಡದ ವಿಜಯಯಾತ್ರೆ ವೇಳೆ ಅಭಿಮಾನಿಗಳು ಸಾಗರೋಪಾದಿಯಲ್ಲಿ ಸೇರಿದ್ದರಿಂದ ಕೆಲವರು ಗಾಯಗೊಂಡಿದ್ದು, ಕೆಲವರು ಅಸ್ವಸ್ಥಗೊಂಡು ಕುಸಿದುಬಿದ್ದಿದ್ದಾರೆ. ಪೊಲೀಸರ ಸಮಯಪ್ರಜ್ಞೆಯಿಂದ ಭಾರೀ ದುರಂತ ತಪ್ಪಿದೆ.
ಮುಂಬೈನ ಮರೇನ್ ಡ್ರೈವ್ ನಲ್ಲಿ ಭಾರತ ತಂಡದ ಆಟಗಾರರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರಿಂದ ಹಲವಾರು ಮಂದಿ ಗಾಯಗೊಂಡಿದ್ದು, ಉಸಿರಾಡಲು ಆಗದೇ ಇಬ್ಬರು ಅಸ್ವಸ್ಥಗೊಂಡಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಅಭಿಮಾನಿಗಳು ಮುಗಿಬಿದ್ದು ಸಂಭ್ರಮ ಆಚರಿಸುತ್ತಿದ್ದಾಗ ಮಹಿಳೆಯೊಬ್ಬರು ಕುಸಿದುಬಿದ್ದಿದ್ದು, ಪೊಲೀಸ್ ಅಧಿಕಾರಿಯೊಬ್ಬರು ಅವರನ್ನು ಹೆಗಲಮೇಲೆ ಹಾಕಿಕೊಂಡು ಜನದಟ್ಟಣೆ ಇರುವ ಪ್ರದೇಶದಿಂದ ಹೊರಗೆ ಕರೆದೊಯ್ದು ರಕ್ಷಿಸಿದ್ದಾರೆ.
ವಿಶ್ವಕಪ್ ವಿಜೇತರ ವಿಜಯಯಾತ್ರೆ ನಂತರ ರಸ್ತೆಯುದ್ದಕ್ಕೂ ಸಾವಿರಾರು ಚಪ್ಪಲಿಗಳು ಬಿದ್ದಿರುವುದು ಪತ್ತೆಯಾಗಿದೆ. ಕಾರುಗಳಿಗೆ ಹಾನಿ ಆಗಿದೆ. ಅಲ್ಲದೇ ಕಂಬವೊಂದು ಬಿದ್ದಿರುವುದು ಪತ್ತೆಯಾಗಿದೆ.
ಭಾರತೀಯ ಆಟಗಾರರನ್ನು ನೋಡಲು ಅಭಿಮಾನಿಯೊಬ್ಬ ಮರವೇರಿ ಫೋಟೊ ತೆಗೆಯಲು ಯತ್ನಿಸಿದ್ದು, ಇದನ್ನು ಗಮನಿಸಿದ ಆಟಗಾರರು ಗಾಬರಿಗೊಂಡಿದ್ದಾರೆ. ಸ್ವತಃ ರೋಹಿತ್ ಶರ್ಮ ಮರದಿಂದ ಕೆಳಗಿಳಿಯುವಂತೆ ಆತನಿಗೆ ಸೂಚಿಸಿದ್ದಾರೆ.
ಅಭಿಮಾನಿಗಳು ಆಟಗಾರರನ್ನು ನೋಡಲು ಮರ, ಕಂಬ, ಮಹಡಿಗಳ ಮೇಲೆ ನಿಂತಿದ್ದಾರೆ. ಇದರಿಂದ ಭದ್ರತಾ ವೈಫಲ್ಯವೂ ಆಗಿದೆ ಎಂಬ ಆರೋಪ ಕೇಳಿಬಂದಿದೆ.
ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಆಟಗಾರರಿಗೆ 125 ಕೋಟಿ ರೂ. ಬಹುಮಾನ ಚೆಕ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮ, ವಿಶ್ವಕಪ್ ಅನ್ನು ಭಾರತದ ಎಲ್ಲರಿಗೂ ಅರ್ಪಿಸುವುದಾಗಿ ಹೇಳಿದರು.