ಆಸ್ಪತ್ರೆಯ ಜನರೇಟರ್ ನಿಂದ ಹೊರಬರುವ ಹೊಗೆ ಸೇವಿಸಿದ 38ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಘಟನೆ ಕರ್ನಾಟಕ ಗಡಿಯಲ್ಲಿರುವ ಕಾಸರಗೋಡಿ ಜಿಲ್ಲೆಯಲ್ಲಿ ಜರುಗಿದೆ.
ಕೇರಳದ ಕಾಸರಗೋಡಿನಲ್ಲಿ ಶಾಲೆಯ ಸಮೀಪದ ಆಸ್ಪತ್ರೆಗೆ ಅಳವಡಿಸಲಾಗಿದ್ದ ಜನರೇಟರ್ ನಿಂದ ಹೊರಬರುತ್ತಿದ್ದ ಹೊಗೆ ಸೇವಿಸಿ ಹಲವಾರು ಮಕ್ಕಳು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೊಗೆ ಸೇವಿಸಿದ್ದಂತೆ ಮಕ್ಕಳು ಮಂಪರು ಬಂದಂತಾಗಿ ಶಾಲೆಯಲ್ಲೇ ಕುಸಿದುಬಿದ್ದಿದ್ದಾರೆ. 38 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, 20 ಮಕ್ಕಳನ್ನು ಪ್ರಾಥಮಿಕ ಚಿಕಿತ್ಸೆ ನಂತರ ಡಿಸ್ಚಾರ್ಜ್ ಮಾಡಲಾಗಿದೆ. ಉಳಿದ 18 ಮಕ್ಕಳ ಪೈಕಿ 8 ಮಕ್ಕಳ ಸ್ಥಿತಿ ಗಂಭೀರವಾಗಿ ನಿಗಾ ಘಟಕದಲ್ಲಿ ಇರಿಸಲಾಗಿದೆ. 13 ಮಕ್ಕಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಿಟ್ಲ್ ಫ್ಲವರ್ ಶಾಲೆಯ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಘಟನೆ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಶಾಲೆಯ ಕೊಠಡಿ ಪಕ್ಕದಲ್ಲೇ ಹಾಕಲಾಗಿದ್ದ ಜನರೇಟರ್ ವಾಸನೆಯಿಂದ ಮಕ್ಕಳು ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದು ಬಂದಿದೆ.