ಮೂರನೇ ಬಾರಿ ಪ್ರಧಾನಿ ಹುದ್ದೆ ಅಲಂಕರಿಸಿದ ನಂತರ ನರೇಂದ್ರ ಮೋದಿ ಮೊದಲ ಬಾರಿ ವಿದೇಶ ಪ್ರವಾಸ ಕೈಗೊಳ‍್ಳಲಿದ್ದು, ಆಪ್ತಮಿತ್ರ ರಷ್ಯಾ ಹಾಗೂ ಆಸ್ಟ್ರೀಯಾ ಪ್ರವಾಸಕ್ಕೆ ತೆರಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಆರಂಭಿಸಿದ ನಂತರವೂ ಮೋದಿ ಅವರ ಮೊದಲ ರಷ್ಯಾ ಭೇಟಿ ಇದಾಗಿದೆ. ರಷ್ಯಾ ಭೇಟಿ ನಂತರ ಆಸ್ಟ್ರಿಯಾಗೆ ಭೇಟಿ ನೀಡಲಿದ್ದು, 41 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಆಸ್ಟ್ರಿಯಾಗೆ ಭೇಟಿ ನೀಡಲಿದ್ದಾರೆ.
ಜುಲೈ 8ರಿಂದ 10ರರೆಗೆ ಪ್ರಧಾನಿ ವಿದೇಶ ಪ್ರವಾಸ ಕೈಗೊಳ್ಳಲಿದ್ದು, ರಷ್ಯಾ ಅಧ‍್ಯಕ್ಷರ ಆಹ್ವಾನದ ಮೇರೆಗೆ ಜುಲೈ 8 ಮತ್ತು 9ರಂದು ಭೇಟಿ ನೀಡಲಿರುವ ಪ್ರಧಾನಿ 22ನೇ ಭಾರತ-ರಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ರಷ್ಯಾ ಭೇಟಿ ವೇಳೆ ಮೋದಿ ಹಾಗೂ ವ್ಲಾದಿಮಿರ್ ಪುಟಿನ್ ಎರಡೂ ದೇಶಗಳ ರಾಜತಾಂತ್ರಿಕ ಸಂಬಂಧ ಬಲಪಡಿಸುವುದು ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದ ನಂತರ ಪ್ರಧಾನಿ ಮೋದಿ ಅವರ ಮೊದಲ ರಷ್ಯಾ ಭೇಟಿ ಆಗಿದ್ದು, 2019ರಲ್ಲಿ ಕೊನೆಯ ಬಾರಿಗೆ ರಷ್ಯಾಗೆ ಭೇಟಿ ನೀಡಿದ್ದರು. ಸಭೆಯಲ್ಲಿ ಉಕ್ರೇನ್ ಮೇಲಿನ ಯುದ್ಧ ನಿಲ್ಲಿಸಲು ಪುಟಿನ್ ಗೆ ಸೂಚಿಸುತ್ತಾರಾ ಎಂಬುದು ಕಾದು ನೋಡಬೇಕಿದೆ.
ರಷ್ಯಾ ಭೇಟಿ ನಂತರ ಮೋದಿ ಆಸ್ಟ್ರಿಯಾಗೆ ಒಂದು ದಿನದ ಭೇಟಿ ನೀಡಲಿದ್ದು, ಆಸ್ಟ್ರಿಯಾ ಅಧ್ಯಕ್ಷ ಅಲೆಗ್ಸಾಂಡರ್ ವ್ಯಾನ್ ಡೆರ್ ಬೆಲ್ ಅವರನ್ನು ಭೇಟಿ ಮಾಡಲಿದ್ದಾರೆ.