ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಲಿಯೊನೆಲ್ ಮೆಸ್ಸಿ ಅಪರೂಪ ಎಂಬಂತೆ ಪೆನಾಲ್ಟಿ ಶೂಟೌಟ್ ನಲ್ಲಿ ಗೋಲು ಬಾರಿಸಲು ವಿಫಲರಾಗಿದ್ದಾರೆ. ಮೆಸ್ಸಿ ಎಡವಟ್ಟಿನ ಹೊರತಾಗಿಯೂ ಅರ್ಜೆಂಟೀನಾ 4-2ರಿಂದ ಗೆದ್ದು ಕೋಪಾ ಅಮೆರಿಕ ಫುಟ್ಬಾಲ್ ಟೂರ್ನಿಯಲ್ಲಿ ಸೆಮಿಫೈನಲ್ ಗೆ ಲಗ್ಗೆ ಹಾಕಿದೆ.
ಟೆಕ್ಸಾಸ್ ನಲ್ಲಿ ಗುರುವಾರ ತಡರಾತ್ರಿ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಉಭಯ ತಂಡಗಳು 1-1ರಿಂದ ಸಮಬಲ ಸಾಧಿಸಿದ್ದರಿಂದ ಪೆನಾಲ್ಟಿ ಶೂಟೌಟ್ ತಲುಪಿತು. ಮೆಸ್ಸಿ ಮಿಸ್ ಮಾಡಿದರೂ ವಿಶ್ವ ಚಾಂಪಿಯನ್ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್ ನಲ್ಲಿ 4-2ರಿಂದ ಎಡುರಾಡೊ ವಿರುದ್ಧ ಪ್ರಯಾಸದ ಗೆಲುವು ದಾಖಲಿಸಿತು.
ಪೆನಾಲ್ಟಿ ಶೂಟೌಟ್ ನ ಮೊದಲ ಯತ್ನದಲ್ಲೇ ನಾಯಕ ಮೆಸ್ಸಿ ಬಾರಿಸಿದ ಗೋಲು ಕಂಬಕ್ಕೆ ಬಡಿದು ವಾಪಸ್ಸಾಯಿತು. ಇದರಿಂದ ಅರ್ಜೆಂಟೀನಾ ಆಘಾತಕ್ಕೆ ಒಳಗಾದರೂ ಲಿಸನಾರ್ಡೊ ಮಾರ್ಟಿನೆಜ್, ಅಲೆಕ್ಸಿಸ್ ಮೆಕ್ ಅಲಿಸ್ಟರ್ ಮುಂತಾದವರು ಗೋಲು ಬಾರಿಸಿ ತಂಡಕ್ಕೆ ಗೆಲುವಿನ ಸಮಾಧಾನ ತಂದುಕೊಟ್ಟರು. ಮೆಸ್ಸಿ ಪದೇಪದೆ ಗಾಯದ ಸಮಸ್ಯೆಗೆ ಒಳಗಾಗುತ್ತಿದ್ದು, ಇದು ಅವರ ಆಟದ ಮೇಲೆ ಪರಿಣಾಮ ಬೀರಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದಕ್ಕೂ ಮುನ್ನ ಮೊದಲ ಅವಧಿಯಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದ ಎಡುರಾಡೋ ಎರಡನೇ ಅವಧಿಯಲ್ಲಿ ಮಿಂಚಿನಾಟದಿಂದ ಅರ್ಜೆಂಟೀನಾಗೆ ಆಘಾತ ನೀಡಿದರು. ಸತತ ದಾಳಿ ನಡೆಸಿದ್ದರಿಂದ ರೋಡ್ರಿಗೋ ಡಿ ಪಾಲ್ ಹ್ಯಾಂಡ್ ಬಾಲ್ ಆಗಿದ್ದರಿಂದ ಸಿಕ್ಕಿದ ಪೆನಾಲ್ಟಿ ಅವಕಾಶದಲ್ಲಿ ಗೋಲು ಬಾರಿಸಿ ಸಮಬಲದ ಗೌರವ ಪಡೆದರು.