ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಲ್ಲಿ ರೈತರಿಗೆ ವಾರ್ಷಿಕ 6000 ರೂ. ನೆರವು ನೀಡುವ ಮೊತ್ತವನ್ನು 8000 ರೂ.ಗೆ ಏರಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಈ ಬಾರಿಯ ಪೂರ್ಣ ಪ್ರಮಾಣದ ಬಜೆಟ್ ನಲ್ಲಿ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ.
ರೈತರಿಗೆ ನೀಡಲಾಗುತ್ತಿರುವ ಧನಸಹಾಯ ಮೊತ್ತದಲ್ಲಿ ಏರಿಕೆ ಮಾಡುವ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ.
2024ನೇ ಸಾಲಿನ ಬಜೆಟ್ ನಲ್ಲಿ ರೈತರಿಗೆ ನೀಡಲಾಗುತ್ತಿರುವ ನೇರವಾಗಿ ಬ್ಯಾಂಕ್ ಖಾತೆಗಳಿಗೆ 4 ತಿಂಗಳಿಗೆ ಒಮ್ಮೆ 2 ಸಾವಿರ ರೂ.ನಂತೆ ಕಂತಿನ ಮೂಲಕ ಧನಸಹಾಯ ನೀಡಲಾಗುತ್ತಿದೆ. ಈ ಮೊತ್ತದಲ್ಲಿ ಏರಿಕೆ ಮಾಡಬೇಕಾದರೆ ಕೃಷಿ ಇಲಾಖೆಯ ಅನುದಾನದಲ್ಲಿ ಹೆಚ್ಚಳ ಮಾಡಬೇಕಾಗಿದೆ.
ಪ್ರಸ್ತುತ ದೇಶದಲ್ಲಿ 11 ಕೋಟಿ ರೈತರು ಪಿಎಂ ಕಿಸಾನ್ ಯೋಜನೆಯಲ್ಲಿ ವಾರ್ಷಿಕ 6000 ರೂ. ಧನ ಸಹಾಯ ಪಡೆಯುತ್ತಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರಕ್ಕೆ 3.04 ಲಕ್ಷ ಕೋಟಿ ರೂ. ವೆಚ್ಚವಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿ ಪಟ್ಟ ಅಲಂಕರಿಸಿದ ಬೆನ್ನಲ್ಲೇ 9.3 ಕೋಟಿ ಜನರಿಗೆ 2000 ಕಂತು ಬಿಡುಗಡೆ ಮಾಡಿದ್ದರು.