53 ವರ್ಷಗಳ ನಂತರ ಇದೇ ಮೊದಲ ಬಾರಿಗೆ 2 ದಿನಗಳ ಕಾಲ ನಡೆಯಲಿರುವ ವಿಶ್ವವಿಖ್ಯಾತ ಪುರಿ ಜಗನ್ನಾಥ ರಥಯಾತ್ರೆ ಆರಂಭವಾಗಿದೆ.
ಒಡಿಶಾದ ಪುರಿ ಜಗನ್ನಾಥ ದೇವಾಲಯದ ರಥಯಾತ್ರೆ ಒಂದು ದಿನ ಮಾತ್ರ ನಡೆಯುತ್ತಿತ್ತು. ಆದರೆ 1971ರ ನಂತರ ಇದೇ ಮೊದಲ ಬಾರಿ 2 ದಿನಗಳ ಕಾಲ ನಡೆಯಲಿದೆ.
ಭಾನುವಾರ ಆರಂಭಗೊಂಡ ಪುರಿ ಜಗನ್ನಾಥ ರಥಯಾತ್ರೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮರ್ಮು, ಒಡಿಶಾ ಮುಖ್ಯಮಂತ್ರಿ ಮೋಹನ್ ಮಹಜಿ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.
ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆ ಕಣ್ತುಂಬಿಕೊಳ್ಳಲು ಜಗತ್ತಿನಾದ್ಯಂತ ಲಕ್ಷಾಂತರ ಜನರು ಭಾಗಿಯಾಗುತ್ತಾರೆ. ಇತ್ತೀಚೆಗಷ್ಟೇ ನ್ಯಾಯಾಲಯದ ತೀರ್ಪಿನ ಪ್ರಕಾರ ದೇವಸ್ಥಾನದ ನಾಲ್ಕೂ ದ್ವಾರಗಳನ್ನು ತೆರೆಯಲಾಗಿತ್ತು. ಇದರಿಂದ ಭಕ್ತರಲ್ಲಿ ಉತ್ಸಾಹ ಕೂಡ ಹೆಚ್ಚಾಗಿದೆ.
ಈ ಬಾರಿ ಜಗನ್ನಾಥ ಉತ್ಸವದಲ್ಲಿ 15ರಿಂದ 20 ಲಕ್ಷ ಭಕ್ತರು ಸೇರುವ ನಿರೀಕ್ಷೆ ಇದ್ದು, ವಿಷ್ಣು, ಬಾಲಭದ್ರ ಹಾಗೂ ಗುಂಡಿಚ ದೇವಸ್ಥಾನಗಳ ದೇವರುಗಳ ರಥಯಾತ್ರೆ ಸುಮಾರು 3 ಕಿ.ಮೀ. ದೂರದವರೆಗೆ ನಡೆಯಲಿದೆ.
ಜಗನ್ನಾಥನ ರಥಯಾತ್ರೆ ಸುಸೂತ್ರವಾಗಿ ನಡೆಯಲು ರಾಜ್ಯ ಸರ್ಕಾರ ತಲಾ ಒಂದು ತುಕಡಿಯಲ್ಲಿ 30 ಸಿಬ್ಬಂದಿ ಹೊಂದಿರುವ 180 ತುಕಡಿಗಳನ್ನು ಭದ್ರತಾ ವ್ಯವಸ್ಥೆಗೆ ನಿಯೋಜಿಸಲಾಗಿದೆ.