ಮಕ್ಕಳು ಸತ್ತರೆ ಕರುಳು ಕಿವುಚಿದಷ್ಟು ನೋವಾಗುತ್ತೆ ಎಂದು ಉಕ್ರೇನ್ ಮೇಲಿನ ಯುದ್ಧದ ಬಗ್ಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬಳಿ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ.
ರಷ್ಯಾ 2 ದಿನದ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಮಂಗಳವಾರ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಮಾತುಕತೆ ವೇಳೆ ಉಕ್ರೇನ್ ಮೇಲಿನ ಯುದ್ಧವನ್ನು ಪ್ರಸ್ತಾಪಿಸಿದರು. 2 ವರ್ಷಗಳ ನಂತರ ರಷ್ಯಾ ಜೊತೆ ನಡೆದ ದ್ವಿಪಕ್ಷೀಯ ಮಾತುಕತೆ ಇದಾಗಿದೆ. ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದ ನಂತರ ಮೊದಲ ಮಾತುಕತೆಯೂ ಆಗಿದೆ
ಮೋದಿ ರಷ್ಯಾಗೆ ಭೇಟಿ ನೀಡಿದ ದಿನವೇ ರಷ್ಯಾ ಉಕ್ರೇನ್ ರಾಜಧಾನಿ ಕೀವ್ ನ ಮಕ್ಕಳ ಆಸ್ಪತ್ರೆಯ ವೈಮಾನಿಕ ದಾಳಿ ನಡೆಸಿದ್ದರಿಂದ ಮಕ್ಕಳು ಸೇರಿದಂತೆ 41 ಮಂದಿ ಅಸುನೀಗಿದ್ದರು. ಈ ಹಿನ್ನೆಲೆಯಲ್ಲಿ ಮೋದಿ ಮಕ್ಕಳ ಸಾವು ಪ್ರಸ್ತಾಪಿಸಿದರು ಎನ್ನಲಾಗಿದೆ.
ನನಗೆ ಮುಗ್ಧ ಮಕ್ಕಳು ಮೃತಪಟ್ಟರೆ ಅಥವಾ ಕೊಲೆಯಾದ ವಿಷಯ ಕೇಳಿದರೆ ಕರುಳು ಕಿವುಚಿದಷ್ಟು ನೋವಾಗುತ್ತದೆ. ಜಗತ್ತು ಶಾಂತಿಯನ್ನು ಬಯಸುತ್ತದೆ. ಗನ್, ಬುಲೆಟ್, ಬಾಂಬ್ ಗಳಿಂದ ಶಾಂತಿ ಮಾತುಕತೆ ಸಾಧ್ಯವಿಲ್ಲ ಎಂದು ಪುಟಿನ್ ಗೆ ಮೋದಿ ಮನವರಿಕೆ ಮಾಡಿಕೊಟ್ಟಿದ್ದಾರೆ.
ನಿನ್ನೆ ನಡೆದ ಔಪಚಾರಿಕ ಮಾತುಕತೆ ವೇಳೆ ಪ್ರಧಾನಿ ಮೋದಿ ಉಕ್ರೇನ್ ಮೇಲಿನ ಯುದ್ಧದ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಿದ್ದಾರೆ. ಯುದ್ಧದಲ್ಲಿ ಮುಗ್ಧರ ಸಾವಿನ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅದರಲ್ಲೂ ಮಕ್ಕಳ ಸಾವನ್ನು ಪ್ರಸ್ತಾಪಿಸಿದ್ದಾರೆ ಎಂದು ಪ್ರಧಾನಿ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿನಯ್ ಕ್ವಾರ್ತ ತಿಳಿಸಿದ್ದಾರೆ.