ಅಧಿಕಾರದ ಶೋಕಿ ತೋರಿಸಲು ತರಬೇತಿಯಲ್ಲಿ ಇರುವಾಗಲೇ ಖಾಸಗಿ ಕಾರಿಗೆ ಸರಕಾರದ ಕೆಂಪುದೀಪ ಹಾಕಿಕೊಂಡು ಸಂಚರಿಸಿದ ಪುಣೆ ಯುವತಿಯನ್ನು ವರ್ಗಾವಣೆ ಮಾಡಲಾಗಿದೆ.
ಪೂಜಾ ಖೇಡ್ಕರ್ ಯುಪಿಎಸ್ ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 821 ಅಂಕ ಪಡೆದು ಪುಣೆಯ ಕಲೆಕ್ಟರ್ ಹುದ್ದೆಗೆ ಆಯ್ಕೆಯಾಗಿದ್ದರು. ಆದರೆ ತರಬೇತಿ ಅವಧಿಯಲ್ಲೇ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಅವರನ್ನು ವಹಸೀಮ್ ಗೆ ವರ್ಗಾಯಿಸಲಾಗಿದೆ.
ಎಐಎಸ್ ಅಧಿಕಾರಿಗಳಿಗೆ ತರಬೇತಿ ಅವಧಿಯಲ್ಲಿ ಕೆಂಪು ಅಥವಾ ನೀಲಿ ದೀಪದ ಬಳಕೆಗೆ ಅನುಮತಿ ಇರುವುದಿಲ್ಲ. ಆದರೆ ಪೂಜಾ ಖೇಡ್ಕರ್ ತರಬೇತಿ ಅವಧಿಯಲ್ಲಿಯೇ ತಮ್ಮ ಖಾಸಗಿ ಆಡಿ ಕಾರಿಗೆ ಕೆಂಪು ದೀಪ ಹಾಕಿಕೊಂಡು ಪ್ರಯಣಿಸುತ್ತಿದ್ದರು.
ಪೂಜಾ ಖಾಸಗಿ ವಾಹನಕ್ಕೆ ಕೆಂಪು ದೀಪ ಹಾಕಿಕೊಂಡು ಪ್ರಯಾಣಿಸುತ್ತಿರುವುದು ಭಾರೀ ಸುದ್ದಿ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಮಹಾರಾಷ್ಟ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ವಿವಾದ ಸೃಷ್ಟಿಯಾಗುತ್ತಿದ್ದಂತೆ ಉನ್ನತ ಮಟ್ಟದ ಅಧಿಕಾರಿಗಳು ಕಾನೂನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಪೂಜಾಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಹೆಚ್ಚುವರಿ ಕಲೆಕ್ಟರ್ ಅಜಯ್ ಮೋರಿ ಕಚೇರಿಯಲ್ಲಿ ಇಲ್ಲದೇ ಇದ್ದಾಗ ಅವರ ಆಸನದಲ್ಲಿ ಪೂಜಾ ಕುಳಿತುಕೊಂಡಿದ್ದಳು. ಅಷ್ಟೇ ಅಲ್ಲದೇ ಮೋರೆ ಅವರ ಅನುಪಸ್ಥಿತಿಯಲ್ಲಿ ಪೀಠೋಪಕರಣಗಳನ್ನು ಬದಲಿಸಿದ್ದಳು. ಮತ್ತು ತನಗಾಗಿ ಹೊಸ ಲೆಟರ್ ಪ್ಯಾಡ್, ಲೆಟರ್ ಹೆಡ್ ಮಾಡಲು ಸಿಬ್ಬಂದಿಗೆ ಸೂಚಿಸಿದ್ದಳು.
ತರಬೇತಿ ಅವಧಿಯಲ್ಲಿಯೇ ಅಧಿಕಾರ ಶೋಕಿ ಮಾಡುತ್ತಾ ದರ್ಪ ತೋರಿದ ಪೂಜಾ ವಿರುದ್ಧ ಕಲೆಕ್ಟರ್ ಸುಹಾಸ್ ಮಹಾರಾಷ್ಟ್ರ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಕೆಯನ್ನು ಪುಣೆಯಿಂದ ವಹಸೀಮ್ ನಗರಕ್ಕೆ ವರ್ಗಾಯಿಸಲಾಗಿದೆ.
ಇದೀಗ ಪೂಜಾ ತನ್ನ ತರಬೇತಿಯಲ್ಲಿ ವಹಸೀಮ್ ನಗರದಲ್ಲೇ ಪೂರ್ಣಗೊಳಿಸಬೇಕಾಗಿದೆ. ಅಲ್ಲದೇ ಪೂಜಾ ಅವರ ತಂದೆ ಕೂಡ ನಿವೃತ್ತ ಅಧಿಕಾರಿಯಾಗಿದ್ದು, ಮಗಳ ಬೇಡಿಕೆಗಳನ್ನು ಈಡೇರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು ಎಂದು ತಿಳಿದು ಬಂದಿದೆ.