ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಹಿರಿಯ ಪತ್ರಕರ್ತೆ ಆಯೇಷಾ ಖಾನಂ ಅವರನ್ನು ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿದೆ.
ಮಾಧ್ಯಮ ಅಕಾಡೆಮಿಗೆ ಅಲ್ಪಸಂಖ್ಯಾತ ಸಮುದಾಯದವರನ್ನು ಮತ್ತು ಮಹಿಳೆಯನ್ನು ಯಾವ ಮುಖ್ಯಮಂತ್ರಿಗಳೂ ನೇಮಿಸಿಲ್ಲ. ಈ ಕೊರತೆಯನ್ನು ನೀವು ಅಳಿಸಿದಂತಾಗುತ್ತದೆ. ಜೊತೆಗೆ ಆಯೇಷಾ ಅವರು ಕಲ್ಯಾಣ ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯವರಾಗಿರುವುದರಿಂದ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಲಿಂಗ ಸಮಾನತೆಗೂ ಮಾನ್ಯತೆ ಕೊಟ್ಟಂತಾಗುತ್ತದೆ ಎನ್ನುವುದು ಕೆ.ವಿ.ಪ್ರಭಾಕರ್ ಅವರ ಅಭಿಪ್ರಾಯವಾಗಿತ್ತು.
ಈ ಅಭಿಪ್ರಾಯಕ್ಕೆ ಸಂಪೂರ್ಣ ಮನ್ನಣೆ ನೀಡಿದ ಮುಖ್ಯಮಂತ್ರಿಗಳು ಇತರೆ ಹಲವು ಅರ್ಹರ ಹೆಸರುಗಳ ನಡುವೆ ಆಯೇಷಾ ಅವರನ್ನು ಹೆಚ್ಚು ಅರ್ಹರು ಎಂದು ತೀರ್ಮಾನಿಸಿ ಆದೇಶ ಹೊರಡಿಸಲು ಸೂಚಿಸಿದರು.
ಹಾಗೆಯೇ ಜನಪರ ಹೋರಾಟದಿಂದಲೇ ಪತ್ರಿಕೋದ್ಯಮಕ್ಕೆ ಪ್ರವೇಶಿಸಿ ಸಾಮಾಜಿಕ ಕಾಳಜಿಗಳನ್ನಿಟ್ಟುಕೊಂಡು ವೃತ್ತಿಯಲ್ಲಿ ತೊಡಗಿರುವ ಚಿತ್ರದುರ್ಗದ ಅಹೋಬಳಪತಿ ಅವರ ಜೊತೆಗೆ ಬೆಂಗಳೂರಿನ ಪತ್ರಿಕಾ ಛಾಯಾಗ್ರಾಹಕರಾದ ಕೆ.ವೆಂಕಟೇಶ್ ಮತ್ತು ಕೊಪ್ಪಳದ ಹಿರಿಯ ಪತ್ರಕರ್ತರಾದ ಕೆ.ನಿಂಗಜ್ಜ ಅವರನ್ನು ಅಕಾಡೆಮಿ ಸದಸ್ಯರನ್ನಾಗಿ ನೇಮಿಸಲಾಗಿದ್ದು. ಇಲ್ಲೂ ಕೂಡ ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯಕ್ಕೆ ಮನ್ನಣೆ ನೀಡಲಾಗಿದೆ.
ಈ ಮೂಲಕ ಇದೇ ಮೊದಲ ಬಾರಿಗೆ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸ್ಥಾನವನ್ನು ನಿರಂತರವಾಗಿ ವೃತ್ತಿಪರತೆ ಕಾಪಾಡಿಕೊಂಡು ಬಂದಿರುವ ಅಲ್ಪಸಂಖ್ಯಾತ ಸಮುದಾಯದ ಹಿರಿಯ ಮಹಿಳಾ ಪ್ರತಿನಿಧಿಯೊಬ್ಬರು ಅಲಂಕರಿಸುತ್ತಿದ್ದಾರೆ.