ಮಧ್ಯಮ ಕ್ರಮಾಂಕದಲ್ಲಿ ಡಿಯೊನ್ ಮೇಯರ್ಸ್ ಅಜೇಯ ಅರ್ಧಶತಕ ಸಿಡಿಸಿ ಏಕಾಂಗಿ ಹೋರಾಟ ನಡೆಸಿದರೂ ಭಾರತ ತಂಡ 23 ರನ್ ಗಳಿಂದ ಜಿಂಬಾಬ್ವೆ ತಂಡವನ್ನು ಸೋಲಿಸಿ 5ಪಂದ್ಯಗಳ ಟಿ-20 ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ.
ಹರಾರೆಯಲ್ಲಿ ಬುಧವಾರ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್ ಗಳಲ್ಲಿ 4 ವಿಕೆಟ್ ಗೆ 182 ರನ್ ಪೇರಿಸಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಜಿಂಬಾಬ್ವೆ ತಂಡ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 159 ರನ್ ಗಳಿಸಲಷ್ಟೇ ಶಕ್ತವಾಯಿತು.
ವಾಷಿಂಗ್ಟನ್ ಸುಂದರ್ ಮತ್ತು ಆವೇಶ್ ಖಾನ್ ದಾಳಿಗೆ ತತ್ತರಿಸಿದ ಜಿಂಬಾಬ್ವೆ ತಂಡ 39 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು.
ಮಧ್ಯಮ ಕ್ರಮಾಂಕದಲ್ಲಿ ಡಿಯೊನ್ ಮೇಯರ್ಸ್ 49 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ ಅಜೇಯ 65 ರನ್ ಆಜೇಯರಾಗಿ ಉಳಿಯುವ ಹೋರಾಟ ನಡೆಸಿದರು. ಮತ್ತೊಂದು ಕಡೆ ಕ್ಲೈವ್ ಮಡಾಂಡೆ 26 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 37 ರನ್ ಬಾರಿಸಿ ಔಟಾದರು. ಇವರಿಬ್ಬರು 6ನೇ ವಿಕೆಟ್ ಗೆ 83 ರನ್ ಜೊತೆಯಾಟದಿಂದ ತಂಡವನ್ನು ಮೇಲೆತ್ತಲು ಪ್ರಯತ್ನಿಸಿದರು.
ಕೊನೆಯಲ್ಲಿ ವಿಲ್ಲಿಂಗ್ಟನ್ ಮಜಕಜಾ (ಅಜೇಯ 18) ಜೊತೆ ಮೇಯರ್ಸ್ ಮುರಿಯದ 7ನೇ ವಿಕೆಟ್ ಗೆ 43 ರನ್ ಜೊತೆಯಾಟದಿಂದ ಹೋರಾಟ ನಡೆಸಿದರೂ ರನ್ ಸರಾಸರಿ ಕಾಯ್ದುಕೊಳ್ಳಲು ಆಗದೇ ಸೋಲುಂಡರು.
ಭಾರತದ ಪರ ವಾಷಿಂಗ್ಟನ್ ಸುಂದರ್ 3 ಮತ್ತು ಆವೇಶ್ ಖಾನ್ 2 ವಿಕೆಟ್ ಪಡೆದರು. ಭಾರತದ ಯುವ ಆಟಗಾರರ ಚುರುಕಿನ ಕ್ಷೇತ್ರರಕ್ಷಣೆಯಿಂದ ಈ ಪಂದ್ಯ ಒಲಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.