ಬಿಹಾರದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಸಿಡಿಲು ಬಡಿದು ಒಂದೇ ದಿನ 25 ಮಂದಿ ಮೃತಪಟ್ಟಿದ್ದು, 39 ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಬಿಹಾರದಲ್ಲಿ ಗುಡುಗು ಸಿಡಿಲಿನಿಂದ ಕೂಡಿದ ವ್ಯಾಪಕ ಮಳೆ ಆಗುತ್ತಿರುವುದರಿಂದ ಜನರು ಮನೆಯಿಂದ ಅನಗತ್ಯವಾಗಿ ಹೊರಗೆ ಬಾರದಂತೆ ರಾಜ್ಯ ಸರ್ಕಾರ ಸೂಚಿಸಿದೆ.
ಮಧುಬಾನಿ ಜಿಲ್ಲೆಯೊಂದರಲ್ಲೇ ಅತಿ ಹೆಚ್ಚು 5 ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ. ಔರಂಗಾಬಾದ್ ನಲ್ಲಿ 4, ಸುಪೌಲ್, ನಳಂದದಲ್ಲಿ ತಲಾ 3, ಲಕ್ಕಿಸರಾಯಿ ಮತ್ತು ರಾಜಧಾನಿ ಪಾಟ್ನದಲ್ಲಿ ತಲಾ 2 ಇಬ್ಬರು ಅಸುನೀಗಿದ್ದಾರೆ.
ಬೇಗುಸರಾಯಿ, ಜಮುಯಿ, ಗೋಪಾಲ್ ಗಂಜ್, ರೋಹ್ಟಸ್, ಸಮಸ್ತಿಪುರ್ ಮತ್ತು ಪುರ್ನಿಯಾದಲ್ಲಿ ತಲಾ ಒಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದು, ಜುಲೈ ಒಂದೇ ತಿಂಗಳಲ್ಲಿ ಇದುವರೆಗೆ ಸಿಡಿಲಿಗೆ 50 ಮಂದಿ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಸ್ತವವಾಗಿ ಸರ್ಕಾರಿ ಸಂಖ್ಯೆಗಿಂತ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಬಾಕ್ರಾ ಬಳಿಯ ಶಾಲೆಯೊಂದರ ಸಮೀಪವಿದ್ದ ಮರಕ್ಕೆ ಸಿಡಿಲು ಬಡಿದಿದ್ದರಿಂದ ಶಾಲೆಯೊಳಗೆ ಇದ್ದ 22 ಮಕ್ಕಳು ಗಾಯಗೊಂಡಿದ್ದರು.
ಸಿಡಿಲು ಬಡಿದು ಮೃತಪಟ್ಟ ಘಟನೆಗೆ ಆಘಾತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ನಿತಿಶ್ ಕುಮಾರ್ ಮೃತ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ಧನ ಘೋಷಿಸಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಉತ್ತರ ಪ್ರದೇಶದಲ್ಲಿ ಸಿಡಿಲು ಬಡಿದು ಒಂದೇ ದಿನ 39 ಮಂದಿ ಮೃತಪಟ್ಟಿದ್ದರು.