ಅಕ್ಷಯ್ ವೃತ್ತಿಜೀವನದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ಪ್ರಶಂಸೆಯೊಂದಿಗೆ ಬಿಡುಗಡೆ ಆದ ಸರ್ಫಿರಾ ಚಿತ್ರ ಮೊದಲ ದಿನವೇ ಮುಗ್ಗರಿಸಿದೆ.
ತಮಿಳಿನ ನಟ ಸೂರ್ಯ ನಟಿಸಿ ಸೂಪರ್ ಹಿಟ್ ಆಗಿದ್ದ ಸುರರೈ ಪೊಟ್ಟು ಚಿತ್ರದ ರಿಮೇಕ್ ಆಗಿರುವ ಸರ್ಫಿರಾ ಚಿತ್ರ ಕಮಲ್ ಹಾಸನ್ ನಟಿಸಿದ ಇಂಡಿಯನ್-2 ಚಿತ್ರದ ಪೈಪೋಟಿಗಿಳಿದು ಒಂದೇ ದಿನ ಬಿಡುಗಡೆ ಆಗಿತ್ತು.
ಬಿಡುಗಡೆ ಮುನ್ನ ಸಾಕಷ್ಟು ಪ್ರಶಂಸೆ ಪಡೆದಿದ್ದ ಸರ್ಫಿರಾ ಚಿತ್ರ ಮೊದಲ ದಿನ ಒಟ್ಟಾರೆ 2.40 ಕೋಟಿ ರೂ. ಗಳಿಸಿ ಮೊದಲ ದಿನವೇ ಮುಗ್ಗರಿಸಿದೆ.
ಚಿತ್ರಕ್ಕೆ ಕೊನೆಯ ಕ್ಷಣದಲ್ಲಿ ಟಿಕೆಟ್ ಮುಂಗಡ ಬುಕ್ಕಿಂಗ್ ನಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದ್ದರೂ ಮೊದಲ ದಿನ ಕೇವಲ 2.40 ಕೋಟಿ ರೂ. ಗಳಿಸಿದೆ. ಇಂಡಿಯನ್-2 ಚಿತ್ರ ಮೊದಲ ದಿನ 26 ಕೋಟಿ ಗಳಿಸಿದ್ದರೂ ನೀರಸ ಪ್ರತಿಕ್ರಿಯೆ ಎಂದು ಹೇಳಲಾಗುತ್ತಿದೆ. ಆದರೆ ಇಂಡಿಯನ್ ಗೆ ಹೋಲಿಸಿದರೆ ಶೇ.10ರಷ್ಟು ಆದಾಯವನ್ನು ಗಳಿಸದೇ ನಿರಾಸೆ ಮೂಡಿಸಿದೆ.
ಕೊರೊನಾ ವೈರಸ್ ನಂತರ ಅಕ್ಷಯ್ ಕುಮಾರ್ ನಟಿಸಿದ 12 ಚಿತ್ರಗಳು ವಿಫಲವಾಗಿದ್ದು, ಸರ್ಫಿರಾ ಸತತ ಸೋಲಿನ ಸರಪಳಿಗೆ ಮತ್ತೊಂದು ಸೇರ್ಪಡೆಯಾಗುವ ಸಾಧ್ಯತೆ ಇದ್ದು, 13ಕ್ಕೇರಲಿದೆ. ವೀಕೆಂಡ್ ವಾರವಾಗಿರುವುದರಿಂದ ಮುಂದಿನ 2 ದಿನಗಳಲ್ಲಿ ಸರ್ಫಿರಾ ಟೇಕಾಫ್ ಆಗುವುದೇ ಎಂಬುದು ಕಾದು ನೋಡಬೇಕಾಗಿದೆ.
ಇದೇ ವೇಳೆ ಕೋವಿಡ್-19 ಪಾಸಿಟಿವ್ ಆಗಿ ಕೊನೆ ಗಳಿಗೆಯಲ್ಲಿ ಕ್ವಾರಂಟೈನ್ ಆಗಿರುವ ಅಕ್ಷಯ್ ಕುಮಾರ್ ಸರ್ಫಿರಾ ಚಿತ್ರದ ನೀರಸ ಆರಂಭಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನನ್ನ ವೃತ್ತಿ ಹಾಗೂ ಸಮಯಪಾಲನೆ ಕುರಿತು ಕೆಲವರು ವದಂತಿಗಳನ್ನು ಹರಡಿಸುತ್ತಿದ್ದಾರೆ. ನನ್ನ ಸೋಲಿನಿಂದ ಖುಷಿ ಪಡುವ ಕೆಲವು ಮಂದಿ ಬಾಲಿವುಡ್ ನಲ್ಲಿ ಇದ್ದಾರೆ. ಅವರು ಯಾರು ಎಂಬುದು ನನಗೆ ಗೊತ್ತಿದೆ ಎಂದು ಹೇಳಿದ್ದಾರೆ.